ಬಂಟ್ವಾಳ: ತಲಪಾಡಿ ಸಮೀಪದ ಪೊನ್ನೊಡಿಯಲ್ಲಿ ರಾಜ್ಯ ಆಹಾರ ನಿಗಮದ ಅಕ್ಕಿ ಶೇಖರಣಾ ಕೇಂದ್ರದಿಂದ ಅಧಿಕಾರಿಗಳು 1.32 ಕೋಟಿ ಮೌಲ್ಯದ 3850 ಕಿಂಟ್ವಾಲ್ ಅನ್ನಭಾಗ್ಯದ ಪಲಾನುಭವಿಗಳಿಗೆ ನೀಡುವ ಅಕ್ಕಿಯನ್ನು ಗೊಡೌನ್ ನಿಂದಲೇ ಕಳವು ಮಾಡಿ ಅವ್ಯವಹಾರ ಮಾಡಿರುವ ದೊಡ್ಡ ಮಟ್ಟದ ಕಳ್ಳರ ಜಾಲವನ್ನು ಭೇದಿಸುವಲ್ಲಿ ಜಿಲ್ಲಾಡಳಿತ ಹಾಗೂ ಸರಕಾರ ವಿಪಲವಾಗಿದ್ದು ತಕ್ಷಣವೇ ತನಿಖೆ ನಡೆಸಿ ಜಾಲ ಭೇದಿಸಿ ನೈಜ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಒತ್ತಾಯಿಸಿದ್ದಾರೆ.
ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಶಾಸಕ ರಾಜೇಶ್ ನಾಯ್ಕ್ ರವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಅಗಸ್ಟ್ 17 ರಂದು ಗೊಡೌನ್ ನಿಂದ ಅಕ್ಕಿ ಕಳವು ನಡೆದಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಸರಕಾರ ಆಹಾರ ನಿರೀಕ್ಷಕರನ್ನು ಅಮಾನತು ಮಾಡಿ ಕೈ ತೊಳೆದುಕೊಂಡಿದೆ, ಇದು ಸರಿಯಾದ ಕ್ರಮವಲ್ಲ, ಈ ಗೋದಾಮಿನಲ್ಲಿರುವ ಎಲ್ಲಾ ಅಧಿಕಾರಿಗಳನ್ನು ಬಂಧಿಸಿ ಅಕ್ಕಿ ಕಳ್ಳತನದ ಜಾಲವನ್ನು ಬಯಲಿಗೆ ಎಳೆಯಬೇಕು ಎಂದು ಅವರು ಒತ್ತಾಯ ಮಾಡಿದರು.
ಈ
ಹಿಂದೆ ಗೊಡೌನ್ ನಿಂದ ಎಷ್ಟು ಕಳವಾಗಿದೆ, ಮತ್ತು ಇದೇ ರೀತಿಯಲ್ಲಿ ಇತರ ತಾಲೂಕಿನಲ್ಲಿ ಕೂಡ ಕಳ್ಳತನ ನಡೆದಿರಬಹುದು ಎಂಬ ಸಂಶಯವಿದ್ದು, ಸಂಬಂಧಿಸಿದ ಆಹಾರ ಸಚಿವರು ಕೂಡಲೇ ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ಕ್ರಮ ತೆಗೆದು ಕೊಳ್ಳಬೇಕು. ಶಾಸಕರು ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿ ಬಡವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು. ಒಂದು ವೇಳೆ ಜಿಲ್ಲಾಡಳಿತ, ಮತ್ತು ಸರಕಾರ ಕಳ್ಳರ ಜೊತೆ ಸೇರಿಕೊಂಡು ಪ್ರಕರಣವನ್ನು ಮುಚ್ಚಿ ಹಾಕಿದರೆ ತಾಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹದ ಮೂಲಕ ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.














