ಧರ್ಮಸ್ಥಳ ಪ್ರಕರಣ, ಪ್ರತ್ಯೇಕ ಎಸ್‌ಐಟಿ ರಚನೆಯಿಂದ ಹಲವು ಅನುಮಾನ ಸೃಷ್ಟಿ: ಎಂ.ತುಂಗಪ್ಪ ಬಂಗೇರ

Coastal Bulletin
ಧರ್ಮಸ್ಥಳ ಪ್ರಕರಣ, ಪ್ರತ್ಯೇಕ ಎಸ್‌ಐಟಿ ರಚನೆಯಿಂದ ಹಲವು ಅನುಮಾನ ಸೃಷ್ಟಿ: ಎಂ.ತುಂಗಪ್ಪ ಬಂಗೇರ

ಬಂಟ್ವಾಳ: ಧರ್ಮಸ್ಥಳದ ಭಾಗದಲ್ಲಿ ನಡೆದಿರುವ ಅತ್ಯಾಚಾರ-ಕೊಲೆಗೆ ಸಂಬಂಧಿಸಿ ಶವ ಹೂತಿಟ್ಟಿರುವ ಆರೋಪಕ್ಕೆ ಸರಕಾರ ಜಿಲ್ಲೆಯ ಸಮರ್ಥ ಪೊಲೀಸ್ ಅಧಿಕಾರಿಗಳ ಬಳಿ ತನಿಖೆ ಮಾಡಿಸದೆ ಅದಕ್ಕಾಗಿ ಪ್ರತ್ಯೇಕ ಎಸ್‌ ಐಟಿ ರಚನೆ ಮಾಡಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ ಎಂದು ದ.ಕ.ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಆ.9ರಂದು ಸಂಜೆ ಬಿ ಸಿ ರೋಡ್ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದಾರೆ.

ಪ್ರಾಮಾಣಿಕ ತನಿಖೆ ನಡೆದು ನೈಜ ಆರೋಪಿಗಳಿಗೆ ಶಿಕ್ಷೆ ಆಗಬೇಕಿದ್ದು, ಆದರೆ ತನಿಖೆ ಸಂದರ್ಭ ಧಾರ್ಮಿಕ ಕ್ಷೇತ್ರ, ಯಾವುದೇ ವ್ಯಕ್ತಿಯನ್ನು ಅವಹೇಳನ ಮಾಡುವುದು ಸರಿಯಲ್ಲ. ಹಲವು ಪ್ರಕರಣಗಳನ್ನು ಬೇಧಿಸಿರುವ ಪಾರದರ್ಶಕ ಪೊಲೀಸ್ ಅಧಿಕಾರಿಗಳು ನಮ್ಮ ಜಿಲ್ಲೆಯಲ್ಲಿದ್ದು, ಆದರೆ ಅವರನ್ನು ಮೂಲೆಗುಂಪು ಮಾಡಿ ಸರಕಾರ ಎಸ್‌ಐಟಿ ರಚನೆ ಮಾಡಿದೆ. ಶವ ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ಸರಕಾರ ಯಾಕೆ ಎಸ್‌ಐಟಿ ರಚನೆ ಮಾಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಸರಕಾರಕ್ಕೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಮೇಲೆ ವಿಶ್ವಾಸವಿಲ್ಲವೇ ಅಥವಾ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಸಮರ್ಥರಿಲ್ಲವೇ ಎಂಬುದಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ। ಜಿ.ಪರಮೇಶ್ವ‌ರ್ ಉತ್ತರ ನೀಡಬೇಕು ಎಂದರು.

ಇಲ್ಲದೇ ಇದ್ದರೆ ನಮಗೆ ಎಸ್‌ಐಟಿ ಮೇಲೆಯೇ ಸಂಶಯ ಬರುವ ಜತೆಗೆ ಜಿಲ್ಲೆಯ ಪೊಲೀಸರು ಸಮರ್ಥರಿಲ್ಲವೇ ಎಂಬ ಅನುಮಾನಗಳು ಮೂಡುತ್ತದೆ ಎಂದರು.

ಧರ್ಮಸ್ಥಳ ಪ್ರಕರಣವು ಪ್ರಸ್ತುತ ತನಿಖಾ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಯಾರೋ ಯಾರನ್ನೋ ಅಪರಾಧಿಗಳು, ಆರೋಪಿಗಳು ಎಂದು ಬಿಂಬಿಸುವುದು ಸರಿಯಲ್ಲ.ಜತೆಗೆ ಹಿಂದೂ ಧಾರ್ಮಿಕ ಕ್ಷೇತ್ರದ ಕುರಿತು ಅವಹೇಳನವನ್ನೂ ನಾನು ಖಂಡಿಸುತ್ತೇವೆ.ತನಿಖೆ ನಡೆದ ನೈಜ ಆರೋಪಿಗಳು ಯಾರೂ ಎಂಬ ಸತ್ಯ ಹೊರಬರಲಿ. ಹಲವು ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ

ಕೊಲೆಯ ಸೌಜನ್ಯ ಎಂಬ ಹೆಣ್ಣು ಮಗುವಿನ ಜತೆಗೆ ಯಾರೇ ಅನ್ಯಾಯಕ್ಕೆ ಒಳಗಾಗಿದ್ದರೂ ಅವರಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ವಾದವಾಗಿದೆ ಎಂದರು.

ಧರ್ಮಸ್ಥಳ ಕ್ಷೇತ್ರವು ನಾಡಿನ ಶ್ರದ್ಧಾತಾಣವಾಗಿದ್ದು, ಅದರ ಕುರಿತು ಅವಹೇಳನ ಮಾಡುವುದು ಸರಿಯಲ್ಲ. ಜತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ಜನಕಲ್ಯಾಣದ ಹತ್ತಾರು ಕಾರ್ಯಕ್ರಮಗಳು ಧರ್ಮಸ್ಥಳ ಕ್ಷೇತ್ರದಿಂದ ನಡೆಯುತ್ತಿದ್ದು, ಲಕ್ಷಾಂತರ ಕುಟುಂಬಗಳು ಅದರ ಲಾಭ ಪಡೆದು ಸ್ವಾಭಿಮಾನಿ ಜೀವನ ಸಾಗಿಸುತ್ತಿದೆ. ಆದರೆ ನಾವು ಯಾವುದೇ ತನಿಖೆಯಾಗದೆ, ನಾವೇ ನ್ಯಾಯಧೀಶರಾಗಿ ತೀರ್ಮಾನ ಕೊಟ್ಟು ಅಪರಾಧಿಗಳೆಂದು ತೀರ್ಮಾನಕ್ಕೆ ಬರಬಾರದು ಎಂದರು.

ಈ ಪ್ರಕರಣದಲ್ಲಿ ಕಮ್ಯೂನಿಸ್ಟರು ವಿನಾಕರಣ ಮೂಗು ತೂರಿಸಿ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವುದು ಸರಿಯಲ್ಲ, ದೇಶದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದ್ದು, ಹಾಗೆಂದು ಹೇಳಿ ತಮ್ಮ ಯೂಟೂಬ್ ಸೃಷ್ಟಿ ಮಾಡಿಕೊಂಡು ಕ್ಷೇತ್ರದ ಕುರಿತು, ಪೂಜ್ಯ ಖಾವಂದರ ಕುರಿತು ಅವಹೇಳನಕಾರಿಯಾಗಿ ಅಭಿಪ್ರಾಯ ವ್ಯಕ ಪಡಿಸುವುದು ಸರಿಯಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

 ಪತ್ರಿಕಾಗೋಷ್ಠಿಯಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕರುನೇಂದ್ರ ಪೂಜಾರಿ, ನಾವೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಗೌಡ, ಯೋಗೀಶ್ ಪೂಜಾರಿ ಅತ್ತಾಜೆ ಉಪಸ್ಥಿತರಿದ್ದರು

Leave a Comment