ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಮುಖಿ ಕಾರ್ಯ ಶ್ಲಾಘನೀಯ. ವರ್ಷಕ್ಕೊಮ್ಮೆ ಆರ್ಥಿಕ ಸಂಕಷ್ಟದಲ್ಲಿರುವವರನ್ನು ಗುರುತಿಸುವ ಸಂಘಟನೆಗಳು ಇವೆ. ಆದರೆ ಪ್ರತೀ ತಿಂಗಳು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸಮಾಜಕಲ್ಯಾಣ ಯೋಜನೆಯಡಿಯಲ್ಲಿ ಬಡವರನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಸಾಧಕರನ್ನು ಕೂಡಾ ಗೌರವಿಸುತ್ತಿದೆ. ಇಂದು ಎಲ್ಲಾ ಕಡೆ ಅತೀ ಹೆಚ್ಚು ಬಂಟರ ಸಮುದಾಯದ ಭವನಗಳಿವೆ. ಇದನ್ನು ಎಲ್ಲಾ ಸಮುದಾಯ ಅನುಕರಣೆ ಮಾಡಬೇಕಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ತಿಳಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್‌ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿದ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸನ್ಮಾನ: ಸಮಾರಂಭದಲ್ಲಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ, ರಾಷ್ಟ್ರಪತಿಗಳ ಸೇವಾ ಪದಕ ಪುರಸ್ಕೃತ ವಿಜಯ ಕಾಂಚನ್ ಬೈಕಂಪಾಡಿ, ಸಂಸ್ಕಾರ ಭಾರತಿ ಮಂಗಳೂರು ಇದರ ಅಧ್ಯಕ್ಷ ಕೆ ಪುರುಷೋತ್ತಮ ಭಂಡಾರಿ ಅಡ್ಯಾರ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಹಿರಿಯ ಪತ್ರಕರ್ತರಾದ ಕೆ. ಆನಂದ ಶೆಟ್ಟಿ, ಪಿ.ಬಿ.ಹರೀಶ್ ರೈ, ಕರ್ನಾಟಕ ಅರಣ್ಯ ಸಂರಕ್ಷಣ ಅಧಿಕಾರಿ (ಎಸಿಎಫ್) ಹಸ್ತಾ ಶೆಟ್ಟಿ, ಪಿಎಚ್ ಡಿ ಪದವಿ ಪಡೆದ ಡಾ.ಪ್ರಿಯಾ ಹರೀಶ್ ಶೆಟ್ಟಿ, ಡಾ.ಮಂಜುಳಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ಸಾಧನೆ
ಮಾಡುತ್ತಿರುವ ಅಕ್ಷಯ ಶೆಟ್ಟಿ, ಸುಷ್ಮಾ ರಾವ್ ಹಾಗೂ ಇತ್ತೀಚೆಗೆ ದಕ ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ವಿಜಯಶಾಲಿಯಾದ ಪತ್ರಕರ್ತರಾದ ನಿಶಾಂತ್ ಶೆಟ್ಟಿ ಕೆಲೆಂಜೂರು ಮತ್ತು ರಾಜೇಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಫಲಾನುಭವಿಗಳ ಮಾಹಿತಿ ನೀಡಿದರು. ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಆರ್ ಜೆ ನಯನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನೂಪ್ ಶೆಟ್ಟಿ ಸುರತ್ಕಲ್ ಪಾರ್ಥಿಸಿದರು.
ವೇದಿಕೆಯಲ್ಲಿ ಮುಂಬೈ ಹೋಟೆಲ್ ಉದ್ಯಮಿ ಆದರ್ಶ್ ಶೆಟ್ಟಿ ಹಾಲಾಡಿ, ಉದ್ಯಮಿ ಅಶೋಕ ಶೆಟ್ಟಿ ಬೆಳ್ಳಾಡಿ , ಜತೆ ಕಾರ್ಯದರ್ಶಿ ಸತೀಶ ಅಡಪ ಸಂಕಬೈಲ್ ಇದ್ದರು.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲು, ಕೊಲ್ಲಾಡಿ ಬಾಲಕೃಷ್ಣ ರೈ, ವಲಯ ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಒಕ್ಕೂಟದ ಸಿಬ್ಬಂದಿಗಳು, ಫಲಾನುಭವಿಗಳು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.














