ಬಂಟ್ವಾಳ ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಫರಂಗಿಪೇಟೆಗೆ ಅಪಾಯಕಾರಿ ಕ್ರಾಸಿಂಗ್ ಹಾಗೂ ರಸ್ತೆ ಬದಿಯ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಅರ್ಕುಳ, ಮೇರಮಜಲು,ಅಬ್ಬೆಟ್ಟು,ಮಾರಿಪಲ್ಲ, ಸುಜೀರು,ಕಡೆಗೋಳಿ, ನೆತ್ತರಕೆರೆ, ಕೊಡ್ಮಾಣ್ ಹೀಗೆ ಇನ್ನಿತರ ಭಾಗದ ಜನರ ದಿನನಿತ್ಯದ ವ್ಯಾಪಾರ, ವ್ಯವಹಾರದ ಪ್ರಮುಖ ಕೇಂದ್ರ ಸ್ಥಾನವಾಗಿ ಗುರುತಿಸಿರುವ ಫರಂಗಿಪೇಟೆ ಸದಾ ಜನನಿಬಿಡ ಜಾಗ.
ಅಪಾಯಕಾರಿ ಕ್ರಾಸಿಂಗ್, ಹೆದ್ದಾರಿ ದಾಟುವುದೇ ಸಾಹಸ:
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫರಂಗಿಪೇಟೆಯ ಮುಖ್ಯ ಜಂಕ್ಷನ್ ನಲ್ಲಿಯೇ ಅಪಾಯಕಾರಿ ಹೆದ್ದಾರಿ ಕ್ರಾಸಿಂಗ್ ಇದ್ದು ನಿರಂತರವಾಗಿ ವೇಗದಿಂದ ಓಡಾಡುವ ಘನ ವಾಹನಗಳ ನಡುವೆ ಸ್ಥಳೀಯ ವಾಹನ ಸವಾರರು, ರಿಕ್ಷಾ ಚಾಲಕರು ಮುಖ್ಯ ರಸ್ತೆಯನ್ನು ದಾಟಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.ವಾಹನ ಸವಾರರೇ ರಸ್ತೆ ದಾಟಲು ಪರದಾಡುತ್ತಿದ್ದರೆ, ಇನ್ನು ಪಾದಚಾರಿಗಳ ಕಥೆ ಹೇಳತೀರದು, ವಿರುದ್ಧ ದಿಕ್ಕಿನಲ್ಲಿ, ಅಡ್ಡ ದಿಡ್ಡಿಯಾಗಿ, ವೇಗವಾಗಿ ಚಲಿಸುವ ವಾಹನಗಳಿಂದ ತಪ್ಪಿಸಿಕೊಂಡು ಸಾರ್ವಜನಿಕರು,ಹಿರಿಯ ನಾಗರಿಕರು,ಶಾಲಾ ಮಕ್ಕಳು ರಸ್ತೆ ದಾಟಲು ಗಂಟೆ ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ.ಇದರಿಂದಾಗಿ ಚಿಕ್ಕ ಪುಟ್ಟ ಅಪಘಾತಗಳು ನಡೆಯುತ್ತಿದೆ,ಮುಖ್ಯ ಜಂಕ್ಷನ್ ನಿಂದ ಸ್ವಲ್ಪ ದೂರಕ್ಕೆ ಹೆದ್ದಾರಿ ಕ್ರಾಸಿಂಗ್ ಸ್ಥಳಾಂತರಿಸಿದರೆ ಸುಗಮ ಸಂಚಾರಕ್ಕೆ ಅನುಕೂಲವಾಗುದರ ಜೊತೆಗೆ ಸಂಭಾವ್ಯ ಅನಾಹುತವನ್ನು ತಪ್ಪಿಸಬಹುದು ಎನ್ನುವುದು ಸಾರ್ವಜನಿಕರ ಆಗ್ರಹ.
ರಸ್ತೆ ಬದಿ, ಫುಟ್ಪಾತ್ ಗಳಲ್ಲೇ ಪಾರ್ಕಿಂಗ್:
ಮೊದಲೇ ಇಕ್ಕಟ್ಟಿನ ಸ್ಥಳವಿರುವ ಜಂಕ್ಷನ್ ನ ರಸ್ತೆಯ ಇಕ್ಕೆಲಗಳಲ್ಲಿ ರಸ್ತೆ ಬದಿ ಹಾಗೂ ಫುಟ್ ಪಾತ್ ಗಳನ್ನು ಅಕ್ರಮಿಸಿ ನಿಲ್ಲುವ ವಾಹನಗಳಿಂದ ರಸ್ತೆ ಮತ್ತಷ್ಟು ಕಿರಿದಾಗಿದೆ, ರಸ್ತೆಯ ಎರಡು ಬದಿಯಲ್ಲಿಯೂ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ತಮ್ಮ ಅಗತ್ಯ ಕಾರ್ಯಗಳಿಗೆ ತೆರಳುವ ಜನ , ಅಲ್ಲೇ
ಪಕ್ಕದಲ್ಲಿ ರಸ್ತೆಯ ಎರಡೂ ಬದಿ ಪ್ರಯಾಣಿಕರ ಬಸ್ ತಂಗುದಾಣವಿದ್ದು ಕ್ಯಾರೇ ಎನ್ನದ ವಾಹನ ಚಾಲಕರು ಅದರ ಮುಂದಯೇ ಅಡ್ಡ ದಿಡ್ಡಿಯಾಗಿ ಪಾರ್ಕಿಂಗ್ ಮಾಡಿ ಹೋಗುದರಿಂದ ನಿತ್ಯ ಪ್ರಯಾಣಿಕರು, ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಅವ್ಯಸ್ಥಿತ ಅಪಾಯಕಾರಿ ಪಾರ್ಕಿಂಗ್ ಅವ್ಯವಸ್ಥೆ ಕೂಡ ಅನಾಹುತಕ್ಕೆ ಎಡೆಮಾಡಿ ಕೊಟ್ಟಂತಾಗುತ್ತದೆ.
ಪೇಟೆಯ ಅಭಿವೃದ್ದಿ, ಸ್ಥಳೀಯ ವಾಹನ ಚಾಲಕರ, ಪಾದಚಾರಿಗಳ,ನಿತ್ಯ ಪ್ರಯಾಣಿಕರ,ಸುರಕ್ಷತೆಯ ದೃಷ್ಟಿಯಿಂದ ಮುಂದಾಗುವ ಅನಾಹುತವನ್ನು ತಪ್ಪಿಸುವ ಸಲುವಾಗಿ ಸಂಬಂಧಪಟ್ಟ ಇಲಾಖೆ ಆದಷ್ಟು ಬೇಗ ಇತ್ತ ಗಮನಹರಿಸಬೇಕೆಂಬುದೇ ಸಾರ್ವಜನಿಕರ ಆಗ್ರಹ.
***********
ಫರಂಗಿಪೇಟೆಯ ಅಪಾಯಕಾರಿ ಕ್ರಾಸಿಂಗ್ ನ್ನು ಮುಂದೆ ಇರುವ ಕುಂಪನಮಜಲು ಕ್ರಾಸ್ ರಸ್ತೆಯ ಸಮೀಪಕ್ಕೆ ಸ್ಥಳಂತರಿಸಿಬೇಕು ಎಂದು ಜಿಲ್ಲಾ ಎಸ್ ಪಿ ಯವರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಎರಡು ವರ್ಷದ ಹಿಂದೆಯೇ ಮನವಿ ಮಾಡಿದ್ದು ಯಾವುದೇ ಸ್ಪಂದನೆ ಇದುವರೆಗೆ ಸಿಕ್ಕಿಲ್ಲ.
ಹರೀಶ್ ಕೆ ಎ
ಪುದು ಗ್ರಾ ಪಂ ಅಭಿವೃದ್ಧಿ ಅಧಿಕಾರಿ
*********
ಅಪಾಯಕಾರಿ ಕ್ರಾಸಿಂಗ್ ಸ್ಥಳಾಂತರ ಅಗತ್ಯ, ಕುಂಪನಮಜಲಿಗೆ ರಿಕ್ಷಾ ಚಾಲಕರು ಹೋಗಬೇಕಾದರೆ ಅರ್ಕುಳಕ್ಕೆ ಹೋಗಿ ಕ್ರಾಸಿಂಗ್ ಮಾಡಿ ಬರುವ ಸ್ಥಿತಿ ಇದೆ.ಪೇಟೆಯ ಪಾರ್ಕಿಂಗ್ ವ್ಯವಸ್ಥೆ ತೀರಾ ಹದಗೆಟ್ಟಿದ್ದು ರಸ್ತೆ ದಾಟಲು ವಾಹನ ಚಾಲಕರು, ಪ್ರಯಾಣಿಕರು ಗಂಟೆ ಕಟ್ಟಲೆ ಕಾಯುವ ಪರಿಸ್ಥಿತಿ.
ಜಗದೀಶ ಎನ್
ಸ್ಥಳೀಯ ರಿಕ್ಷಾ ಚಾಲಕರು
********














