ಹಾವುಗಳನ್ನು ಕಂಡಾಗಲೆಲ್ಲ ಹೌಹಾರುವವರೇ ಅಧಿಕ. ನಾಗರ ಹಾವನ್ನು ಕಂಡರಂತೂ ಎಲ್ಲೋ ಏನೋ ತಪ್ಪಾಗಿದೆ. ಹಾಗಾಗಿ ಹಾವು ಕಾಣಿಸಿಕೊಂಡಿದೆ ಎಂದು ತಲೆಬಿಸಿ ಮಾಡಿಕೊಳ್ಳುವವರಿದ್ದಾರೆ. ಇನ್ನು ಅಪಾಯಕಾರಿ ವಿಷಕಾರಿ ಹಾವುಗಳನ್ನು ಕಂಡರಂತೂ ಕೊಂದೇ ಬಿಡುವ ಜಾಯ ಮಾನ ಹೆಚ್ಚಿನವರದ್ದು. ಅಂಥವರ ನಡುವೆ ಅದೆಷ್ಟೋ ಹಾವುಗಳನ್ನು ಸಲೀಸಾಗಿ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಕಾಯಕದಲ್ಲಿ ಧನ್ಯತೆ ಕಂಡವರು ಮೂಡುಬಿದಿರೆಯ ಪಡುಕೊಣಾಜೆ ಹೌದಾಲ್ ನಿವಾಸಿ ದಿನೇಶ್ ಪೂಜಾರಿ. ಹಾವು ಕಾಣಿಸಿಕೊಂಡಿದೆ ಎಂದು ಕರೆಮಾಡಿದಲ್ಲೆಲ್ಲ ಧಾವಿಸಿ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಹಾವುಗಳ ಲೆಕ್ಕ ಹತ್ತು ಸಾವಿರ ದಾಟಿರಬಹುದು ಎನ್ನುತ್ತಾರೆ ದಿನೇಶ್!
ತಂದೆ ವಿಠಲ ಪೂಜಾರಿ ಹಾವುಗಳ ಬಗ್ಗೆ ತೋರಿಸಿದ್ದ ಕಾಳಜಿ ಆರರ ಬಾಲಕನಾಗಿದ್ದಾಗಲೇ ದಿನೇಶ್ ಹಾವುಗಳನ್ನು ಕೈಗೆತ್ತಿಕೊಳ್ಳುವ ಧೈರ್ಯ ತುಂಬಿದ್ದು ಗಮನಾರ್ಹ. ಕಳೆದ ಮೂರು ದಶಕಗಳಲ್ಲಿ ಹಾವು ಕಂಡಲ್ಲಿ ಧಾವಿಸಿ ಅವುಗಳನ್ನು ಅಪಾಯದಿಂದ ರಕ್ಷಿಸಿ ಸುರಕ್ಷಿತವಾಗಿ ಅಡವಿಗೆ ಬಿಡುವಲ್ಲಿ ಅವರು ತೋರಿದ ಶ್ರದ್ಧೆ ವಿಶೇಷವಾದದ್ದು. ವೃತ್ತಿಯಲ್ಲಿ ಬಡಗಿಯಾದರೂ ಪ್ರವೃತ್ತಿಯಲ್ಲಿ ಇವರು ಉರಗ ಪ್ರಿಯ. ವಿಶೇಷವಾಗಿ ಗಾಯಗೊಂಡ ಹಾವುಗಳಿಗೂ ಇವರು ಆರೈಕೆ ಮಾಡಿ ರಕ್ಷಿಸಿದ್ದಿದೆ.
ತಮ್ಮ ಪರಿಸರದಲ್ಲಿ ಹಾವು ಕಾಣಿಸಿಕೊಂಡಾಗ ಹೌಹಾರುವ ಜನತೆಯ ಕರೆಗೆ ತಡರಾತ್ರಿಯೂ ಸ್ಪಂದಿಸಿ ದಿನೇಶ್ ಧಾವಿಸುತ್ತಾರೆ. ಸ್ವಂತ ವಾಹನವಿಲ್ಲದ ಕಾರಣ ರಿಕ್ಷಾ ಬಾಡಿಗೆ ಪಡೆಯುತ್ತಾರೆ. ಉಳಿದಂತೆ ಖುಷಿಯಿಂದ ಕೊಟ್ಟರೆ ಮಾತ್ರ ಸ್ವೀಕರಿಸುತ್ತಾರೆ. 20 ಅಡಿ ಕಾಳಿಂಗ, ಭಾರೀ ಹೆಬ್ಬಾವು, ಅಪಾಯಕಾರಿ ನಾಗರ ಹಾವು ಹೀಗೆ ಎಲ್ಲವನ್ನೂ ಪ್ರೀತಿಯಿಂದ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಕಾಯಕದಲ್ಲಿ ಜನರ ಭೀತಿ ನಿವಾರಿಸುವಲ್ಲಿ ಅವರು ಧನ್ಯತೆ ಕಂಡಿದ್ದಾರೆ.
ಹಾವುಗಳ ಸುರಕ್ಷತೆಯ ಬಗ್ಗೆ ಕಾಳಜಿ ವ್ಯಕ್ತಪಡಿಸುವ ದಿನೇಶ್ ಒಂದು ತಿಂಗಳ ಹಿಂದೆ ಪ್ಲಾಸ್ಟಿಕ್ ಬಲೆಗೆ ಸಿಲುಕಿ ನರಳಿದ್ದ, ದೇಹದ ಭಾಗ ಕೆಲವೆಡೆ ಕೊಳೆತು ಹುಳವಾಗಿದ್ದ ಹೆಬ್ಬಾವೊಂದನ್ನು ಕಂಡು ತಿಂಗಳ ಕಾಲ ಮನೆಯ ಪರಿಸರದಲ್ಲೇ ಆರೈಕೆ ಮಾಡಿ ಕಾಡಿಗೆ ಬಿಟ್ಟ ಖುಷಿಯಲ್ಲಿದ್ಧಾರೆ. ಸಾಮಾಜಿಕ ಜಾಲತಾಣದಲ್ಲೀಗ ಈ ಕ್ಲಿಪ್ಪಿಂಗ್ ಹರಿದಾಡುತ್ತಲೇ ಉರಗ, ಪರಿಸರ ಪ್ರಿಯರ ಪ್ರಶಂಸೆಗೆ ಪಾತ್ರವಾಗಿದೆ.
ಇದು ಅಪಾಯಕಾರಿ, ಸವಾಲಿನ ಕೆಲಸ
ಎನ್ನುವ ದಿನೇಶ್ ಇದನ್ನೆಂದೂ ಹೊಟ್ಟೆ ಪಾಡಿಗಾಗಿ ಬಳಸಿಕೊಂಡಿಲ್ಲ ಕಾರ್ಪೆಂಟರ್ ವೃತ್ತಿಯ ಜತೆಗೆ ನಾಸಿಕ್ ಬ್ಯಾಂಡ್ ಸೆಟ್ ಹೀಗೆ ಸಣ್ಣ ಮಟ್ಟಿನ ಸಂಪಾದನೆಯೇ ಅವರ ಜೀವನಾಧಾರ. ಪತ್ನಿ ವಿನುತಾ, ಪುತ್ರಿ ಮನಸ್ವಿನಿ ಅವರ ಸಹಕಾರವೂ ದಿನೇಶ್ ಅವರ ಬೆಂಗಾವಲಿಗಿದೆ. ಈ ಕರ್ತವ್ಯ ನಿರ್ವಹಣೆಯನ್ನು ಹತ್ತಿರದಿಂದ ಕಂಡ ಸ್ಥಳೀಯರಾದ ಪ್ರೀತಿ ನಾಯಕ್, ಸಂಜಿತ್ ಕುಲಾಲ್ ಇದೀಗ ದಿನೇಶ್ ಅವರ ಜತೆ ಸೇರಿ ಕಲಿಯುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಪುತ್ರ ಹದಿಮೂರರ ಹರೆಯದ ಮಿಥುನ್ ಗೆ ತಂದೆಯ ಸೇವಾ ಮನೋಭಾವ ಸ್ಫೂರ್ತಿ ನೀಡಿ ಸಹಕರಿಸುವ ಮಟ್ಟಕ್ಕೆ ಬೆಳೆದಿದೆ. ಸಧ್ಯ ಆಸುಪಾಸಿನ ಪರಿಸರ ಮಾತ್ರವಲ್ಲದೇ ಹೊರ ವಲಯಕ್ಕೂ ತನ್ನ ಕಾರ್ಯ ನಿರ್ವಹಣೆ, ಕಾಳಜಿಯಿಂದ ಹಾವುಗಳ ಆಪ್ತ ಮಿತ್ರನಾಗಿ ದಿನೇಶ್ ( 9902189790) ಗಮನ ಸೆಳೆಯುತ್ತಿದ್ದಾರೆ.
*******
ಹಾವುಗಳ ಬಗ್ಗೆ ಹೆದರುವ ಜನತೆಗೆ ದಿನೇಶ್ ಅವರು ಸ್ಪಂದಿಸುವ ರೀತಿ ನಿಜಕ್ಕೂ ಅಭಿನಂದನೀಯ. ಹಾವು ಹಿಡಿದುದಕ್ಕೆ ಬಡವರ ಕಡೆಯೆಂದಾದರೆ ಅವರು ಉಚಿತ ಸೇವೆ ನೀಡಿದ್ದೂ ಇದೆ. ಹಿಂದೆ ಹೋಂಗಾರ್ಡ್ ಅಶೋಕ್ ನಂತರ ಇನ್ನು ಹಾವು ಹಿಡಿಯುವವರಿಲ್ಲ ಎನ್ನುವ ಆತಂಕವನ್ನು ದಿನೇಶ್ ನಿವಾರಿಸಿದ್ದಾರೆ. ಅರಣ್ಯ ಇಲಾಖೆಯವರೂ ಅವರ ನೆರವನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಅಪಾಯಕಾರಿ ಕೆಲಸದಲ್ಲಿ ಅವರ ಜೀವ/ನ ಸುರಕ್ಷೆಗಾಗಿ ಕ್ರಮ ಕೈಗೊಳ್ಳುವಂತೆ ಇಲಾಖೆಯವರ ಗಮನ ಸೆಳೆಯಲಾಗಿದೆ.
ಸಂತೋಷ್ ಕೋಟ್ಯಾನ್, ಮಾಜಿ ಅಧ್ಯಕ್ಷರು, ಹಾಲಿ ಉಪಾಧ್ಯಕ್ಷರು ಶಿರ್ತಾಡಿ ಪಂಚಾಯತ್.














