ಬಂಟ್ವಾಳ:ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ, ಮರಳು,ಜೂಜುದಂಧೆಯ ವಿರುದ್ಧ ಕಠಿಣಕ್ರಮಕ್ಕೆ ಮುಂದಾಗಿದ್ದ ಬಂಟ್ವಾಳ ಉಪವಿಭಾಗದ ಎಎಸ್ಪಿ ಶಿವಾಂಶು ರಜಪೂತ್ ಅವರನ್ನು ರಾಜಕೀಯ ಪ್ರೇರಿತವಾಗಿ ಹಠಾತ್ತನೇ ವರ್ಗಾವಣೆಗೊಳಿಸಲಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನಿಷ್ಠಾವಂತ ಅಧಿಕಾರಿ ಬಂಟ್ವಾಳ ಉಪವಿಭಾಗದ ಪೊಲೀಸ್ ಎಎಸ್ಪಿಯಾಗಿದ್ದ ಶಿವಾಂಶು ಅವರು ಈ ಎಲ್ಲಾ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿ ಒಳ್ಳೆ ಕೆಲಸ ಮಾಡುತ್ತಿದ್ದರು. ರಾಜಕೀಯ ಪ್ರಭಾವ ಬಳಸಿ ಅವರನ್ನು ಹಠಾತ್ತನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಗೆ ವರ್ಗಾಯಿಸಿರುವುದು ಖಂಡನೀಯವಾಗಿದೆ ಎಂದರು.
ಅನಂತಾಡಿಯಲ್ಲಿ ಗಣಿಗಾರಿಕೆಯಿಂದ ಗುಹಾತೀರ್ಥಕ್ಕೆ ತೊಂದರೆ ಆಗುತ್ತಿದೆ ಎಂಬ ಆರೋಪವನ್ನು ಮಾಡಿ ಪ್ರತಿಭಟನೆಯನ್ನು ಮಾಡಿದ್ದೆವು ಎಂದು ನೆನಪಿಸಿದ ಅವರು, ಬಿಜೆಪಿಯವರು ಬೇರೆಯವರಿಗೆ ಬುದ್ಧಿವಾದ ಹೇಳುತ್ತಾರೆ, ಆದರೆ ಅವರಿಗೆ ಬುದ್ಧಿ ಹೇಳಬೇಕಾದವರು ಜನರು ಎಂದರು. ಒಂದು ಲೋಡ್ ಮರಳಿಗೆ 15 ಸಾವಿರ ರೂ ಕೊಡಬೇಕಾದ ಪರಿಸ್ಥಿತಿ ಇದ್ದು, ಮನೆ ಕಟ್ಟುವವರು ಸಂಕಷ್ಟ ಪಡುತ್ತಿದ್ದಾರೆ. ತಾಲೂಕಿನ ಒಂದು
ಕಡೆ ಪರವಾನಿಗೆ ಪಡೆದುಕೊಂಡವರು ಈಗ ಎಲ್ಲಾ ಕಡೆಗಳಲ್ಲೂ ಮರಳುಗಾರಿಕೆ ಮಾಡುತ್ತಾರೆ ಎಂದು ರೈ ಆರೋಪಿಸಿದರು.
ಕೆಲ ದಿವಸದ ಹಿಂದೆ ಜೂಜು ಕೇಂದ್ರವೊಂದರಲ್ಲೆ ಕೊಲೆ ಯತ್ನ ಪ್ರಕರಣ, ಹಲ್ಲೆಗಳು ನಡೆದಿತ್ತು .ಅದನ್ನು ರಸ್ತೆಯಲ್ಲಾದ ಪ್ರಕರಣ ಎಂದು ತಿರುಚಲಾಗಿತ್ತು. ಹೆಣ್ಣುಮಕ್ಕಳ ಕರಿಮಣಿ ಅಡವಿಟ್ಟು ಜುಗಾರಿ ದಂಧೆಯಲ್ಲಿ ತೊಡಗಿಸಿಕೊಂಡವರಿದ್ದಾರೆ. ಮರಳುಗಾರಿಕೆಯ ಪಕ್ಕದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ, ಇಬ್ಬರೂ ಶಾಸಕರ ಬೆಂಬಲ ಇದೆ ಎಂದು ನೇರವಾಗಿ ಆರೋಪಿಸುತ್ತೇನೆ ಎಂದು ರೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಆಲಿ ಬೋಳಂತೂರು, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಮುರಳೀಧರ ರೈ ಮಠಂತಬೆಟ್ಟು, ಪ್ರಸಾದ್ ಕೌಶಲ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಮಾನಾಥ ರೈ, ಮಹಮ್ಮದ್ ಬಡಗನ್ನೂರು, ಪದ್ಮನಾಭ ರೈ ಉಪಸ್ಥಿತರಿದ್ದರು.
















