ಬಂಟ್ವಾಳ:ಮನೆಯ ಮುಂಭಾಗಿಲಿನ ಚಿಲಕ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಲಾಗಿದ್ದ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ಸಾವಿರಾರು ರೂ ನಗದು ಕಳವು ಮಾಡಿದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಗೋರೆಮಾರ್ ಎಂಬಲ್ಲಿ ನಡೆದಿದೆ. ಗೋರೆಮಾರ್ ನಿವಾಸಿ ಪ್ರಕಾಶ್ ಎಂಬವರ ಮನೆಯಿಂದ ಒಟ್ಟು ರೂ. 4,13,000 ಮೌಲ್ಯದ ಬೆಲೆಬಾಳುವ ಸೊತ್ತುಗಳು ಕಳವಾಗಿದೆ.
ಕೋಣೆಯೊಳಗೆ ಇರಿಸಲಾಗಿದ್ದ ಸ್ಟೀಲ್ ಕವಾಟಿನ ಲಾಕರ್ ನಲ್ಲಿ ಇಟ್ಟಿದ್ದ ಸುಮಾರು 16 ಗ್ರಾಂ ತೂಕದ 3 ಜೊತೆ ಚಿನ್ನದ ಬೆಂಡೋಲೆ, ಸುಮಾರು 18 ಗ್ರಾಂ ತೂಕದ ಕೈ ಉಂಗುರಗಳು -3 ಹಾಗೂ ನಗದು ರೂ. 65,000/- ಮನೆಯ ದೇವರ ಮಂಟಪದಲ್ಲಿದ್ದ ಸುಮಾರು 20,000/- ಮೌಲ್ಯದ ಬೆಳ್ಳಿಯ ಶ್ರೀಕೃಷ್ಣ ದೇವರ ವಿಗ್ರಹ ಮತ್ತು ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು ರೂ. 5000/- ಕಳವು ಆಗಿರುತ್ತದೆ. ಕಳವಾದ ಚಿನ್ನದ ಅಂದಾಜು ಬೆಲೆ 3,23,000 ಮತ್ತು ಕಳವಾದ ಸೊತ್ತುಗಳು ಹಾಗೂ ನಗದು ಸೇರಿ ಒಟ್ಟು ಮೌಲ್ಯ ರೂ. 4,13,000/- ಆಗಬಹುದು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮನೆಯ ಯಜಮಾನ ಪ್ರಕಾಶ್ ಅವರು ಕೇರಳ ರಾಜ್ಯದಲ್ಲಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದು ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದರು.
ಮನೆಯಲ್ಲಿ ಪತ್ನಿ ಮಕ್ಕಳು ಅತ್ತೆಯ ಜೊತೆಗಿರುತ್ತಿದ್ದರು. ಶಾಲೆಗೆ ರಜಾ ಆಗಿದ್ದರಿಂದ ಅತ್ತೆ ಯವರು ಬೆಂಗಳೂರಿಗೆ
ದೊಡ್ಡ ಮಗನ ಮನೆಗೆ ಹೋಗಿದ್ದು, ಪತ್ನಿ ಮಕ್ಕಳು ಎ. 23 ರಂದು ಶಿವಮೊಗ್ಗದಲ್ಲಿರುವ ತಾಯಿ ಮನೆಗೆ ತೆರಳಿದ್ದರು. ಮೇ.6 ಹೂವಿನ ಗಿಡಗಳಿಗೆ ನೀರು ಹಾಕಲು ಬಂದಿದ್ದ ನೆರೆಮನೆಯ ವ್ಯಕ್ತಿಯೋರ್ವರು ಮನೆಯ ಎದುರಿನ ಬಾಗಿಲು ಸ್ವಲ್ಪ ತೆರೆದಿರುವುದನ್ನು ಕಂಡು ಮನೆಯವರಿಗೆ ತಿಳಿಸಿದ್ದಾರೆ.
ವಿಷಯ ತಿಳಿದು ಮನೆಗೆ ಬಂದು ನೋಡಿದಾಗ ಎರಡು ಬೆಡ್ ರೂಂ ನಲ್ಲಿದ್ದ 3 ಸ್ಟೀಲ್ ಕವಾಟು, ಹಾಲ್ ನಲ್ಲಿದ್ದ 1 ಸ್ಟೀಲ್ ಕವಾಟ್, ಸ್ಟೇರ್ ಕೇಸ್ ಬಳಿಯಿದ್ದ ಸ್ಟೀಲ್ ಕವಾಟನ್ನು ಆಯುಧದಿಂದ ಮೀಟಿ ಬಟ್ಟೆ ಬರೆಗಳನ್ನು ಚೆಲ್ಲಾ ಪಿಲ್ಲಿ ಮಾಡಿದ್ದಲ್ಲದೆ ಅದರಲ್ಲಿ ಇರಿಸಲಾಗಿದ್ದ ಬೆಲೆ ಬಾಳುವ ನಗ ಹಾಗೂ ನಗದು ಕಳವು ಮಾಡಿದ್ದು ಕಂಡು ಬಂತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ, ಡಾಗ್ ಸ್ವ್ಕಾಡ್,ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.














