ಬಂಟ್ವಾಳ: ಮಂಗಳೂರಿನ ಊರ್ವಸ್ಟೋರ್ ನಲ್ಲಿರುವ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನ ಎನ್ನೆಸ್ಸೆಸ್ ನ ಪ್ರಥಮ ವಾರ್ಷಿಕ ವಿಶೇಷ ಶಿಬಿರ "ಸ್ವಸ್ತಿಕ ಹಳ್ಳಿಹಬ್ಬ"ವು ನೆತ್ರಕೆರೆ ಸಮೀಪದ ಹೊಳ್ಳರಬೈಲ್ ನಲ್ಲಿ ಮೇ8ರಿಂದ 14ರವರೆಗೆ ನಡೆಯಲಿದೆ ಎಂದು ಸ್ವಸ್ತಿಕ್ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಗುರುವಾರ ಸಂಜೆ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನಲ್ಲಿ ಪದವಿ ವ್ಯಾಸಂಗ ಮಾಡುವ 64 ವಿದ್ಯಾರ್ಥಿಗಳು 7 ದಿನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ವಿಜ್ಞಾನ ಮತ್ತು ಮನೋಧರ್ಮಕ್ಕಾಗಿ ಯುವ ಜನತೆ ಎಂಬ ದ್ಯೇಯದೊಂದಿಗೆ ನಡೆಯುವ ಈ ಶಿಬಿರವನ್ನು 8ರಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸುವರು ಎಂದರು
ಪ್ರತಿದಿನವೂ ವಿವಿಧ ಸಂಘ, ಸಂಸ್ಥೆಗಳ ಸಹಕಾರದಿಂದ ವಿವಿಧ ಕಾರ್ಯಕ್ರಮ ಇರಲಿದ್ದು, ಬೀದಿ ನಾಟಕ ತರಬೇತಿ, ಮಣ್ಣು ಉಳಿಸಿ ಅಭಿಯಾನ, ಹೊನಲು ಬೆಳಕಿನ ಕಬಡ್ಡಿ, ಉಚಿತ ವೈದ್ಯಕೀಯ ಶಿಬಿರ, ಸೈಬರ್ ಸೆಕ್ಯುರಿಟಿ ಕುರಿತ ಮಾಹಿತಿ, ಪರಿಸರ ಮಾಲಿನ್ಯ ನಿರ್ವಹಣೆ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂದರ್ಶನ,
ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ, ಅರಣ್ಯ ಇಲಾಖೆ ಉದ್ಯಾನವನ ಸಂದರ್ಶನ, ಸ್ಥಳೀಯರಿಗೆ ನೃತ್ಯ ಸ್ಪರ್ಧೆ, ಪರಿಸರ ಮಾಲಿನ್ಯ, ಸಂರಕ್ಷಣೆ, ಹೊನಲು ಬೆಳಕಿನ ಕ್ರಿಕೆಟ್ ನಡೆಯಲಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭಸ್ಮಾಸುರ ಮೋಹಿನಿ ಯಕ್ಷಗಾನ, ವಿಠಲ ನಾಯಕ್ ಬಳಗದಿಂದ ಗೀತ ಸಾಹಿತ್ಯ ಸಂಭ್ರಮ ಇರಲಿದೆ. 14ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ "ಸ್ವಸ್ತಿಕ ಸೇವಾರತ್ನ" ಪ್ರಶಸ್ತಿಯನ್ನು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಅವರಿಗೆ ನೀಡಿ ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಶಿಬಿರದ ನಿರ್ದೇಶಕರಾದ ಪ್ರಿನ್ಸಿಪಾಲ್ ಡಾ. ಮಾಲಿನಿ ಹೆಬ್ಬಾರ್, ರಾ.ಸೇ.ಯೋ.ಅಧಿಕಾರಿ ವಿದ್ಯಾಲಕ್ಷ್ಮೀ ಪಿ.ಶೆಟ್ಟಿ, ಎನ್ನೆಸ್ಸೆಸ್ ಘಟಕದ ನಾಯಕ ಶ್ರೀಹರಿ ಉಪಸ್ಥಿತರಿದ್ದರು.














