ಬಂಟ್ವಾಳ: ಬಡತನ ಶಾಪ ಅಲ್ಲ. ಸಾವಿರ ವರ್ಷಗಳ ಹಿನ್ನೆಲೆ ಇರುವ ರಂಗಭೂಮಿ ಕ್ಷೇತ್ರವು ಇಂದಿಗೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡು ಬಂದಿದೆ. ಕಲೆಯ ಕುರಿತು ನಿಷ್ಠೆ, ಪ್ರಾಮಾಣಿಕತೆ ಇದ್ದರೆ ದೊಡ್ಡ ಗೌರವ ಸಿಗಲು ಸಾಧ್ಯ. ಪ್ರಾಚೀನತೆ ಕಡಿಮೆ ಇದ್ದರೂ ತುಳು ರಂಗಭೂಮಿ ಬೆಳೆದ ರೀತಿ ಅದ್ಬುತವಾಗಿದೆ. ರಂಗಭೂಮಿಯಲ್ಲಿ ತೊಡಗಿಕೊಂಡಿರುವವರೇ ಸಮಾಜಕ್ಕೆ ಅನಿವಾರ್ಯವಾಗುತ್ತಾರೆ. ಎಂದು ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.ತುಕರಾಮ್ ಪೂಜಾರಿ ಹೇಳಿದರು.
ಅವರು ಮಂಗಳವಾರ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ತುಳು ಕೂಟ ಬಂಟ್ವಾಳ ಹಾಗೂ ತುಳು ನಾಟಕ ಕಲಾವಿದರ ಒಕ್ಕೂಟದ ಸಹಯೋಗದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆಯನ್ನು ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ತುಳು ಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ, ತುಳು ರಂಗಭೂಮಿಗೆ ಬಂಟ್ವಾಳದ ಕೊಡುಗೆ ದೊಡ್ಡದಾಗಿದ್ದು, ರಂಗಭೂಮಿ ಘನತೆ, ಗೌರವ ತೋರಿಸಿಕೊಡುವ ಕಾರ್ಯ. ಅದರಲ್ಲಿ ಇನ್ನಷ್ಟು ಮಂದಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ
ದಿನಾಚರಣೆಗಳು ಪೂರಕವಾಗಿದೆ.
ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ ಉಪಸ್ಥಿತರಿದ್ದರು.
ಹಿರಿಯ ರಂಗಕರ್ಮಿ ಮಂಜು ವಿಟ್ಲ ಪ್ರಸ್ತಾವನೆಗೈದರು. ತುಳು ನಾಟಕ ಕಲಾವಿದರ ಒಕ್ಕೂಟದ ಸಂಚಾಲಕ ಸುಭಾಶ್ಚಂದ್ರ ಜೈನ್ ಸ್ವಾಗತಿಸಿದರು. ಹಿರಿಯ ರಂಗಕರ್ಮಿ ಸದಾಶಿವ ಡಿ ತುಂಬೆ ವಂದಿಸಿದರು. ತುಳು ಕೂಟದ ಕಾರ್ಯದರ್ಶಿ ಎಚ್.ಕೆ.ನಯನಾಡು ಕಾರ್ಯಕ್ರಮ ನಿರ್ವಹಿಸಿದರು.














