ತುಂಬೆ ಹಾಗೂ ಸಜೀಪನಡು ಮದ್ಯೆ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಗ್ರೀನ್ ಸಿಗ್ನಲ್. ನೇತ್ರಾವತಿ ನದಿಗೆ ಅಡ್ಡಲಾಗಿ ಸುಮಾರು ೬೦ ಕೋ.ರೂ. ವೆಚ್ಚದಲ್ಲಿ ೩೪೦ ಮೀ.ಉದ್ದದ ಸೇತುವೆ. ಗ್ರಾಮೀಣ ಭಾಗವೂ ಸೇರಿದಂತೆ ಬಂಟ್ವಾಳ, ಬಿ.ಸಿ.ರೋಡುನಿಂದ ಮುಡಿಪು, ದೇರಳಕಟ್ಟೆಗೆ ಸುಲಭ ಸಂಪರ್ಕ.

Coastal Bulletin
ತುಂಬೆ ಹಾಗೂ ಸಜೀಪನಡು ಮದ್ಯೆ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಗ್ರೀನ್ ಸಿಗ್ನಲ್. ನೇತ್ರಾವತಿ ನದಿಗೆ ಅಡ್ಡಲಾಗಿ ಸುಮಾರು ೬೦ ಕೋ.ರೂ. ವೆಚ್ಚದಲ್ಲಿ ೩೪೦ ಮೀ.ಉದ್ದದ ಸೇತುವೆ. ಗ್ರಾಮೀಣ ಭಾಗವೂ ಸೇರಿದಂತೆ ಬಂಟ್ವಾಳ, ಬಿ.ಸಿ.ರೋಡುನಿಂದ ಮುಡಿಪು, ದೇರಳಕಟ್ಟೆಗೆ ಸುಲಭ ಸಂಪರ್ಕ.

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಹಾಗೂ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮೀಣ ಪ್ರದೇಶಗಳನ್ನು ಬೆಸೆಯುವ ನೇತ್ರಾವತಿ ನದಿಗೆ ಅಡ್ಡಲಾಗಿ ಸುಮಾರು ೬೦ ಕೋ.ರೂ. ವೆಚ್ಚದಲ್ಲಿ ೩೪೦ ಮೀ.ಉದ್ದದ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಗ್ರೀನ್ ಸಿಗ್ನಲ್ ದೊರಕಿದ್ದು, ವಿಸ್ತ್ರುತ ಯೋಜನಾ ವರದಿ(ಡಿಪಿಆರ್) ಕ್ಲೀಯರ್ ಆದ ತತ್‌ಕ್ಷಣ ತಾಂತ್ರಿಕ ಅನುಮೋದನೆ ಲಭಿಸಿ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಸೇತುವೆ ನಿರ್ಮಾಣಗೊಳ್ಳಲಿರುವ ಪ್ರದೇಶದ ನದಿಯ ಎರಡು ಬದಿ ಕೂಡ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದು, ಸ್ಥಳೀಯ ಶಾಸಕ ಪ್ರಸ್ತುತ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಹಿಂದೆ ಸಚಿವರಾಗಿದ್ದ ವೇಳೆಯೇ ತುಂಬೆ-ಸಜೀಪ ಮಧ್ಯೆ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ(ಕೆಆರ್‌ಡಿಸಿಎಲ್)ದ ಮೂಲಕ ಕ್ರೀಯಾಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಹಲವು ಕಾರಣಕ್ಕೆ ಅದು ವಿಳಂಬವಾಗಿದ್ದು, ಕಳೆದ ಡಿಸೆಂಬರ್‌ನಲ್ಲಿ ಸೇತುವೆಗೆ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿತ್ತು.

ಇದೀಗ ಲೋಕೋಪಯೋಗಿ ಇಲಾಖೆಯ ಮೂಲಕ ೬೦ ಕೋ.ರೂ. ಅನುದಾನ ಮಂಜೂರಾಗಿ ನಬಾರ್ಡ್ ಆರ್‌ಐಡಿಎಫ್ ೩೧ನಡಿ ಸೇತುವೆ ನಿರ್ಮಾಣವಾಗಲಿದೆ. ಸೇತುವೆ ನಿರ್ಮಾಣದ ಟೆಂಡರ್ ಪ್ರಕ್ರಿಯೆಗೆ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಸಿಆರ್‌ಝಢ್ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇಲಾಖೆಯು ಈಗಾಗಲೇ ಸ್ಥಳೀಯ ಮಣ್ಣು ಪರೀಕ್ಷೆಯನ್ನೂ ಪೂರ್ಣಗೊಳಿಸಿದ್ದು, ಜು. ೩ರಂದು ಬೆಂಗಳೂರಿನಲ್ಲಿ ನಡೆಯುವ ಸಮಿತಿ ಸಭೆಯಲ್ಲಿ ಮಂಜೂರಾತಿ ಸಿಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿದೆ.

ಒಟ್ಟು ೩೪೦ ಮೀ. ಉದ್ದಕ್ಕೆ ಸೇತುವೆ ನಿರ್ಮಾಣವಾಗಲಿದ್ದು, ೧೨ ಮೀ. ಅಗಲವನ್ನು ಹೊಂದಿರುತ್ತದೆ. ಮಧ್ಯೆ ೮ ಮೀ. ಅಗಲದ ರಸ್ತೆ ನಿರ್ಮಾಣವಾಗಲಿದೆ. ಸೇತುವೆಯಲ್ಲಿ ಒಟ್ಟು ೯ ಅಂಕಣಗಳಿದ್ದು, ೮ ಅಂಕಣಗಳು ೩೦ ಮೀ. ಅಂತರದಲ್ಲಿದ್ದು, ೧ ಅಂಕಣ ೭೦ ಮೀ. ಅಂತರಕ್ಕೆ

ಬೌಸ್ಟಿಂಗ್ ಮಾದರಿಯಲ್ಲಿ ನಿರ್ಮಾಣಗೊಳ್ಳಲಿದೆ. ೬ ಮೀ. ಎತ್ತರಕ್ಕೆ ಸ್ಲಾಬ್ ನಿರ್ಮಾಣವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸೇತುವೆಯ ಎರಡೂ ಬದಿ ಸಂಪರ್ಕ ರಸ್ತೆಗಳು, ಒಂದಷ್ಟು ಉದ್ದಕ್ಕೆ ತಡೆಗೋಡೆ ನಿರ್ಮಾಣವಾಗಲಿದೆ. ಈ ಸೇತುವೆಯು ತುಂಬೆ ಜಂಕ್ಷನ್ ಹಾಗೂ ಸಜೀಪ ಜಂಕ್ಷನ್ ಮೂಲಕ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಮುಡಿಪು-ಮೆಲ್ಕಾರ್ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸಲಿದೆ. ತುಂಬೆ, ಪುದು-ಫರಂಗಿಪೇಟೆ, ಮೇರಮಜಲು, ಕಳ್ಳಿಗೆ, ಅಮ್ಮುಂಜೆ ಮೊದಲಾದ ಗ್ರಾಮೀಣ ಭಾಗವೂ ಸೇರಿದಂತೆ ಬಂಟ್ವಾಳ, ಬಿ.ಸಿ.ರೋಡು ಸುತ್ತಮುತ್ತಲ ಭಾಗದ ಜನ ಸಜೀಪ, ಮುಡಿಪು, ದೇರಳಕಟ್ಟೆ ಭಾಗವನ್ನು ಸಂಪರ್ಕಿಸಲು ಅನುಕೂಲವಾಗಲಿದೆ.

ಮಂಗಳೂರು ವಿಶ್ವವಿದ್ಯಾನಿಲಯ, ದೇರಳಕಟ್ಟೆಯ ವಿವಿಧ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳು, ಕೇರಳವನ್ನು ಸಂಪರ್ಕಿಸುವ ದೃಷ್ಟಿಯಿಂದ ಬಹಳ ಅನುಕೂಲವಾಗುವ ಸೇತುವೆ ಎನಿಸಿಕೊಳ್ಳಲಿದೆ. ಪ್ರಸ್ತುತ ತುಂಬೆ ಭಾಗದ ಮಂದಿ ಸಜೀಪ ಪ್ರದೇಶವನ್ನು ಸಂಪರ್ಕಿಸಬೇಕಾದರೆ ಸುತ್ತುಬಳಸಿ ಸಾಗಬೇಕಾದ ಅನಿವಾರ್ಯತೆ ಇತ್ತು. ಪ್ರಸ್ತುತ ತುಂಬೆ-ಸಜೀಪ ಮಧ್ಯೆ ನಾಡದೋಣಿ ಸಂಪರ್ಕವಿದ್ದು, ಆದರೆ ಅದರ ಬಳಕೆ ತೀರಾ ಕಡಿಮೆಯಾಗಿದೆ.

ಸೇತುವೆ ನಿರ್ಮಾಣದ ದೃಷ್ಟಿಯಿಂದ ಸರಕಾರದ ಮಟ್ಟದಲ್ಲಿ ಅಂತಿಮ ಹಂತದ ಪ್ರಕ್ರಿಯೆಗಳು ನಡೆಯುತ್ತಿದ್ದು, ಡಿಪಿಆರ್ ಕ್ಲೀಯರ್ ಆದ ಬಳಿಕ ತಾಂತ್ರಿಕ ಅನುಮೋದನೆ ಸಿಕ್ಕಿ ಮುಂದೆ ಟೆಂಡರ್ ಪ್ರಕ್ರಿಯೆಗಳು ಆರಂಭಗೊಳ್ಳುತ್ತದೆ. ಜತೆಗೆ ಸಿಆರ್‌ಝಢ್ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಜೈಪ್ರಕಾಶ್ ಸಿ.

ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಬಂಟ್ವಾಳ

Leave a Comment