ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆಯು ಬಂಟ್ವಾಳದ ಉನ್ನತಿ ಸೌಧ ಸಭಾಂಗಣದಲ್ಲಿ ನಡೆಯಿತು.
ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕೋಳಿ ಅಂಕ ನಡೆಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಅನುಮತಿಗಾಗಿ ಪೋಲಿಸ್ ಠಾಣೆಗೆ ಬರಬೇಡಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ರವರ ಹೇಳಿಕೆಯ ಬಗ್ಗೆ ಸಭೆಯಲ್ಲಿ ಮೆಚ್ಚುಗೆಯನ್ನು ಹಾಗೂ ಅಭಿನಂದನೆಯನ್ನು ವ್ಯಕ್ತ ಪಡಿಸಿದರು.
ಸಭೆಯಲ್ಲಿ ಜಿಲ್ಲೆಯ ಹಲವು ಕಡೆಯಲ್ಲಿ ಅನಧಿಕೃತವಾಗಿ ಕೋಳಿ ಅಂಕ. ಜೂಜಾಟಗಳು ಹಾಗೂ ಅಕ್ರಮ ಮದ್ಯ ಮಾರಾಟಗಳು ನಡೆಯುತ್ತಿದ್ದು, ಯಾವುದೇ ನಂಬಿಕೆಯ ನೆಪವೊಡ್ಡಿ ಸಮಾಜಕ್ಕೆ ಮಾರಕವಾದ ವಿಚಾರಗಳು ಸಮಾಜದ ಸ್ವಾಸ್ಥ್ಯ ಹದಗೆಡಲು ಕಾರಣವಾಗುತ್ತಿದೆ. ಆದ್ದರಿಂದ ಇಂತಹ ಸಮಾಜ ಬಾಹಿರ ವಿಚಾರವನ್ನು ಜಿಲ್ಲಾ ಜನಜಾಗೃತಿ ವೇದಿಕೆ ತೀವ್ರವಾಗಿ ಖಂಡಿಸುತ್ತಿದೆ.
ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ರವರು ಮಾತನಾಡಿ ಜಿಲ್ಲೆಯಲ್ಲಿ ಜನಜಾಗೃತಿ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಬಾರಿ ಸುಳ್ಯದಲ್ಲಿ ನಡೆದ ಶಿಬಿರದಲ್ಲಿ 131 ಮಂದಿ
ಶಿಬಿರಾರ್ಥಿಗಳು ಭಾಗವಹಿಸಿದ್ದು. ಪೂಜ್ಯರು ಶಿಬಿರಕ್ಕೆ ಬಂದು ಎಲ್ಲಾ ಶಿಬಿರಾರ್ಥಿಗಳನ್ನು ಆಶೀರ್ವದಿಸಿದ್ದಾರೆ. ಈ ಶಿಬಿರ ಈ ಬಾರಿ ರಾಜ್ಯದಲ್ಲಿ ನಡೆದ ಉತ್ತಮ ಶಿಬಿರವಾಗಿದೆ. ಈಗಾಗಲೇ ಶಿಬಿರಕ್ಕೆ ಯೋಜನೆಯಿಂದ ರೂ.25000/- ಅನುದಾನ ನೀಡುತಿದ್ದು, ಮುಂದಿನ ವರ್ಷದಿಂದ ಬಜೆಟ್ ನಲ್ಲಿ ಅನುದಾನವನ್ನು ಹೆಚ್ಚಿಸುವ ಬಗ್ಗೆ ಸೂಚನೆ ನೀಡಿದರು.
ಅದೇ ರೀತಿ ಜಿಲ್ಲಾ ವೇದಿಕೆಗೆ ಪ್ರತೀ ತಾಲೂಕಿನಿಂದ 6 ಮಂದಿ ಕೋ-ಆಪ್ಸ್ ಸದಸ್ಯರಿರಬೇಕು. ತಾಲೂಕು ಸಮಿತಿ ಇಲ್ಲದೇ ಇರುವ ತಾಲೂಕಿನಲ್ಲಿ ಹೊಸ ಸಮಿತಿ ರಚನೆ ಮಾಡಲು ನಿರ್ದೇಶನ ನೀಡಿದರು. ಜೊತೆಗೆ ತಾಲೂಕು ಸಮಿತಿಯ ಖಾತೆಯನ್ನು ಬದಲಾವಣೆ ಮಾಡುವ ಬಗ್ಗೆ ಸೂಚನೆ ನೀಡಿದರು. ಸಭೆಯಲ್ಲಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್ ಕಾಪಿನಡ್ಕ, ನಿಕಟಪೂರ್ವ ಜಿಲ್ಲಾಧ್ಯಕ್ಷ ಎನ್. ಎ ರಾಮಚಂದ್ರ, ವೇದಿಕೆಯ ಕೋ-ಆಪ್ ಸದಸ್ಯರು ಹಾಗೂ ಯೋಜನೆಯ ಎಲ್ಲಾ ಕ್ಷೇತ್ರ ಯೋಜಾಧಿಕಾರಿಗಳು ಉಪಸ್ಥಿತರಿದ್ದರು.
ನಿರ್ದೇಶಕ ಮಹಾಬಲ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ನಿರ್ದೇಶಕ ಪ್ರವೀಣ್ ಕುಮಾರ್ ಧನ್ಯವಾದವಿತ್ತರು.










