ಕಣ್ವತೀರ್ಥ,ಹೆಸರೇ ಹೇಳುವಂತೆ ಇದು ಒಂದು ಬರೀ ಊರಲ್ಲ ಭೂಮಿಗೆ ಇಳಿದ ದೇವಲೋಕವೆಂದು ಹೇಳಿದರೆ ತಪ್ಪಾಗಲಾರದು. ಅಂದೊಂದು ದಿನ ಭಾಷಾವಾರು ಪ್ರಾಂತ್ಯ ರಚನೆಯಾದಾಗ ಕೇರಳಕ್ಕೆ ಸೇರಿಹೋದ ತುಲುನಾಡಿನ ಭಾಗವಾದ ಕಾಸರಗೋಡಿಗೆ ಹೊನ್ನ ಕಳಶವನ್ನು ಇಟ್ಟಂತೆ ಇದೆ ಈ ಕಣ್ವತೀರ್ಥ. ರಾಷ್ಟ್ರೀಯ ಹೆದ್ದಾರಿ N H.66 ಕರ್ನಾಟಕದ ಗಡಿ ತಲಪಾಡಿಯನ್ನು ದಾಟಿ ಮುಂದಕ್ಕೆ 5 ಕಿ.ಲೋ ಮೀಟರ್ ಅಂತರದ ತೂಮಿನಾಡಲ್ಲಿ ಬಲಕ್ಕೆ 2 ಕಿ ಲೋ ಮೀಟರ್ ದೂರದಲ್ಲಿ ಇದೆ ಈ ಕಣ್ವತೀರ್ಥವೆಂಬ ಪುಣ್ಯಸ್ಥಳ. ಅರಬ್ಬೀ ಸಮುದ್ರದಿಂದ ಬೀಸುವ ತಂಗಾಳಿ,ಸುತ್ತಲೂ ಹಸಿರು ಹೊಲಗದ್ದೆಗಳ ನಡುವೆ ಕಂಗೊಳಿಸುತ್ತಿರುವ ಈ ಊರೊಂದು ಚಿಕ್ಕ ಹಳ್ಳಿ. ಅಲ್ಲೊಂದು ಶ್ರೀರಾಮನ ದೇಗುಲ. ಜೀವನದ ಜಂಜಾಟದಿಂದ ಸೋತು ಹೋದ ಮನಕ್ಕೆ ಶಾಂತಿ ನೆಮ್ಮದಿಯನ್ನು ಕರುಣಿಸುವ ತಾಣ. ಮನಸ್ಸಿನ ದುಗುಡ ಧುಮ್ಮಾನವನ್ನು ಕಳೆದು ದಿವ್ಯ ಅನುಭೂತಿಯ ಅನುಭಾವ ಇಲ್ಲಿ ದೊರೆಯುತ್ತದೆ.
ಐತಿಹ್ಯ
ನಮ್ಮ ದೇಶದಲ್ಲಿ ಅದೆಷ್ಟೋ ಪುಣ್ಯ ಕ್ಷೇತ್ರಗಳು ಇವೆ.ಎಲ್ಲದಕ್ಕೂ ಅದರದ್ದೇ ಆದ ಐತಿಹ್ಯ, ಮಹತ್ವ ಇದೆ.ಈ ಭಾರತದ ಪುಣ್ಯದ ಮಣ್ಣಿನಲ್ಲಿ ಅದೆಷ್ಟೋ ಪವಾಡ ಸದೃಶ ಘಟನೆಗಳು, ಕಾರಣೀಕ ಗಳು ಅಂದಿನಿಂದ ಇಂದಿನವರೆಗೆ ನಡೆಯುತ್ತಾ ಬಂದಿದೆ.ಇದಕ್ಕೆ ಈ ಕ್ಷೇತ್ರವೂ ಹೊರತಲ್ಲ. ಸಾವಿರಾರು ವರ್ಷಗಳ ಹಿಂದೆ ಕಣ್ವ ಮಹರ್ಷಿಗಳ ಆಶ್ರಮ ಇದಾಗಿತ್ತು.ಈ ಪ್ರಕೃತಿ ರಮಣೀಯವಾದ ಪ್ರಶಾಂತ ಪರಿಸರದಲ್ಲಿ ಅವರು ಇಲ್ಲಿ ಆಶ್ರಮವನ್ನು ನಿರ್ಮಿಸಿ ವೇದೋಪನಿಷತ್ತುಗಳ ಜ್ಞಾನ ಧಾರೆಯನ್ನು ವಿದ್ಯಾರ್ಥಿಗಳಿಗೆ ಉಣಬಡಿಸುತ್ತಿದ್ದರು. ಆ ಕಾಲದ ಪ್ರಮುಖ ವಿಧ್ಯಾಕೇಂದ್ರ ಇದಾಗಿತ್ತು ಎಂದು ಚರಿತ್ರೆಯಿಂದ ತಿಳಿದು ಬರುತ್ತದೆ. ರಾಮಾಯಣದ ಕಾಲದಲ್ಲಿ ವಿಭೀಷಣ ಪೂಜಿಸಿದಂತಹ 'ಕೋದಂಡ ಪಾಣಿ ಶ್ರೀರಾಮ' ನ ವಿಗ್ರಹವು ಇಲ್ಲಿದೆ. ಕಣ್ವ ಮಹರ್ಷಿಗಳ ಆರಾಧ್ಯ ದೈವ ಕೋದಂಡ ರಾಮ ಆಗಿದ್ದು ಕಾಲಾನಂತರದಲ್ಲಿ ಆ ವಿಗ್ರಹವು ಕಣ್ವ ಮುನಿಗಳ ಕೈ ಗೆ ಬಂತು.ಅದನ್ನು ಅವರು ಇಲ್ಲಿ ಪ್ರತಿಷ್ಠಾಪಿಸಿದರು ಎಂದು ತಿಳಿದು ಬರುತ್ತದೆ. ಗುಡಿಯ ಮುಂಭಾಗದಲ್ಲಿ ಒಂದು ಕೆರೆಯನ್ನು ನಿರ್ಮಿಸಿ ಅದರ ನೀರಿನಿಂದ ಕೋದಂಡರಾಮನಿಗೆ ಕಣ್ವರು ನಿತ್ಯ ಅಭಿಷೇಕವನ್ನು ಮಾಡುತ್ತಿದ್ದರು. ಮುಂದಕ್ಕೆ ಆ ಕೆರೆಯು ಕಣ್ವತೀರ್ಥವೆಂದು ಕರೆಯಲ್ಪಟ್ಟಿತು.
ತದನಂತರದ ಕಾಲದಲ್ಲಿ ವಾಯುದೇವರ ಅವತಾರವೆಂದೇ ನಂಬಲಾಗಿರುವ ಆಚಾರ್ಯ ಮಧ್ವರು ಈ ಕ್ಷೇತ್ರಕ್ಕೆ ಸಂದರ್ಶಿಸಿದರು. ಪ್ರಶಾಂತವೂ, ಪವಿತ್ರವೂ ಆದ ಈ ಕ್ಷೇತ್ರವು ಅವರಿಗೆ ಬಹಳ ಪ್ರೀಯವಾಯಿತು. ಅವರು ಅನೇಕ ಚಾತುರ್ಮಾಸ್ಯಗಳನ್ನು ಇಲ್ಲಿ ಕೈಗೊಂಡಿದ್ದರೆಂಬುವುದು ಚಾರಿತ್ರಿಕ ಸತ್ಯವಾಗಿದೆ.ಮಧ್ವಾಚಾರ್ಯರು ಅನೇಕ ಪುರಾಣ ಪ್ರವಚನಗಳನ್ನು ತಮ್ಮ ಶಿಷ್ಯ ವೃಂದಕ್ಕೆ ನೀಡುತ್ತಿದ್ದರು.
ಮಹಾ ಜ್ಞಾನಿಗಳೂ, ಅದ್ವಿತೀಯ ವಾಗ್ಮಿಗಳು ಆಗಿದ್ದ ಮಧ್ವರು ಇಲ್ಲಿ ಅನೇಕ ಪವಾಡಗಳನ್ನು ಮಾಡಿದ್ದಾರೆ.ಪ್ರಮುಖವಾಗಿ ಒಂದೊಂಮ್ಮೆ ಗ್ರಹಣ ಕಾಲದಲ್ಲಿ ತಮ್ಮ ಶಿಷ್ಯವೃಂದದೊಂದಿಗೆ ಸಮುದ್ರ ಸ್ನಾನಕ್ಕೆಂದು ಸಮುದ್ರಕ್ಕೆ ಇಳಿದಾಗ,ಒಂದರ ಹಿಂದೆ ಒಂದರಂತೆ ಅಬ್ಬರಿಸಿ ಬರುತಿದ್ದ ಸಮುದ್ರದ ಅಲೆಗಳ ರಭಸಕ್ಕೆ ಶಿಷ್ಯರು ಭಯಭೀತರಾಗಿ ಸಮುದ್ರಕ್ಕೆ ಇಳಿಯಲು ಹಿಂದುಮುಂದು ನೋಡುತ್ತಿದ್ದಾಗ ಆಚಾರ್ಯರು ಕೇವಲ ವೀಕ್ಷಣೆ ಮಾತ್ರದಿಂದಲೇ ಸಮುದ್ರವನ್ನು ಶಾಂತಗೊಳಿಸಿದರು. ನಂತರ ತಾವೂ ಶಿಷ್ಯರೊಂದಿಗೆ ಸಮುದ್ರ ಸ್ನಾನ ಮಾಡಿದರು.ಅಂದಿನಿಂದ ಕಣ್ವತೀರ್ಥದಲ್ಲಿ ಅರಬೀ ಕಡಲು ರಾಮಸಮುದ್ರವೆಂದು ಹೆಸರಾಯಿತು. ಈಗಲೂ ಆ ನಿರ್ದಿಷ್ಟ ಸ್ಥಳದಲ್ಲಿ ಸಮುದ್ರವು ಶಾಂತವಾಗಿಯೇ ಇರುತ್ತದೆ.ಈಗಲೂ ಆಟಿ ಅಮವಾಸ್ಯೆ ,ಸೋಣ ಅಮವಾಸ್ಯೆಯ ಪುಣ್ಯ ದಿನಗಳಲ್ಲಿ ಊರ ಪರವೂರ ಭಕ್ತರು ಇಲ್ಲಿ ತೀರ್ಥ ಸ್ನಾನಕ್ಕೆ ಬರುತ್ತಾರೆ. ಅಲ್ಲಿಯೇ ಹತ್ತಿರದಲ್ಲಿ ಒಂದು ಸಿಹಿ ನೀರಿನ ಕೆರೆಯೂ ಇದೆ.ಇದನ್ನು ತುಲುವಲ್ಲಿ 'ಎಡ್ಡೆನೀರ್' ಎಂದು ಕರೆಯುತ್ತಾರೆ, ಇದನ್ನು ರಾಮದೇವರು ಸೀತಾ ದೇವಿಗಾಗಿ ನಿರ್ಮಿಸಿದರೆಂದೂ, ಪರಶುರಾಮರು ನಿರ್ಮಿಸಿದರೆಂದೂ ಹಿರಿಯರು ಹೇಳುತ್ತಿದ್ದರು. ತೀರ್ಥ ಸ್ನಾನದ ದಿನದಂದು ಶ್ರೀಕ್ಷೇತ್ರ ಕಣ್ವತೀರ್ಥ ಮಠದ ಅರ್ಚಕ ವರ್ಗದವರು ಅಲ್ಲಿ ಬಂದ ಭಕ್ತರಿಗೆ ತೀರ್ಥ ಪ್ರಸಾದವನ್ನು ನೀಡುವುದು ವಾಡಿಕೆಯಾಗಿದೆ.ಅಂದು ಸಮುದ್ರ ಸ್ನಾನಕ್ಕಿಂತ ಮೊದಲು ಈ ಕೆರೆಯಲ್ಲಿ ಸ್ನಾನ ಮಾಡಿದರೆ ಚರ್ಮ ಸಂಬಂಧಿ ರೋಗಗಳು ಗುಣವಾಗುತ್ತದೆ ಎಂಬ ನಂಬಿಕೆಯಂತು ಸತ್ಯ. ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಪಾರ್ದನದಲ್ಲಿಯೂ ರಾಮಸಮುದ್ರದ ಉಲ್ಲೇಖವಿದೆ.
ಉಡುಪಿಯ ಅಷ್ಟಮಠಗಳು ದ್ವಂದ್ವ ಮಠ ಪದ್ದತಿಗೆ ಕಣ್ವತೀರ್ಥ ಮಠವೇ ಮಧ್ವರಿಗೆ ಸ್ಪೂರ್ತಿ ಆಗಿರಬಹುದೆಂದರೆ ಅತಿಶಯೋಕ್ತಿ ಆಗಲಾರದು.ಇದಕ್ಕೆ ಸಾಕ್ಷಿ ಎಂಬಂತೆ ಮಠದ ಮುಂಭಾಗದಲ್ಲಿ ಒಂದು ಅಶ್ವಥ ವೃಕ್ಷವಿರುವ ಸುಂದರವಾದ ಕಟ್ಟೆಯನ್ನು ಕಾಣಬಹುದು. ಇದರ ಬಗ್ಗೆ ಸ್ಥಳಪುರಾಣವು ಹೀಗೆ ಹೇಳುತ್ತದೆ. ಮಧ್ವಾಚಾರ್ಯರು ಇಲ್ಲಿ ತಮ್ಮ ಶಿಷ್ಯ ವೃಂದದೊಂದಿಗೆ ಇರುವಾಗ ಒಂದು ದಿನ ಶಿಷ್ಯರಲ್ಲಿ 'ಅದೋ ಅಲ್ಲಿ ಇರುವ ವೃಕ್ಷದ ಬುಡದಲ್ಲಿ ನಾಲ್ಕು ದಿಕ್ಕುಗಳಿಗೆ ಮುಖಮಾಡಿ ಇಬ್ಬಿಬ್ಬರು ವಟುಗಳು ನಿಲ್ಲಿ'ಎಂದರಂತೆ,ಶಿಷ್ಯರೂ ಹಾಗೇ ಮಾಡಿದರಂತೆ.' ನೀವು ನಿಂತ ದಿಕ್ಕಿನಲ್ಲೇ ಕೆಳಗಿಳಿದು ಬನ್ನಿ 'ಎಂದರಂತೆ .ಅದೇ ಪ್ರಕಾರವಾಗಿ ಉಡುಪಿಯಲ್ಲಿ ಶ್ರೀಕೃಷ್ಣ ದೇವರ ಪರ್ಯಾಯ ಪೂಜಾ ಕ್ರಮವನ್ನು ನಡೆಸಿಕೊಂಡು ಬರಲಾಯಿತೆಂದು ತಿಳಿದು ಬರುತ್ತದೆ. ಅದರ ಕುರುಹು ಎಂಬಂತೆ ಈಗಲೂ ಆ ಅಶ್ವಥ ಕಟ್ಟೆಯ ಸುತ್ತಲೂ ನಾಲ್ಕು ಕಮಾನುಗಳನ್ನು ಕಾಣಬಹುದು.
ಈ ಕ್ಷೇತ್ರಕ್ಕೆ ಬಂದ ಇನ್ನೊಬ್ಬ ಮಹಾಚೈತನ್ಯವೆಂದರೆ ಅದು ಶ್ರೀ ವಿಜಯಧ್ವಜ ತೀರ್ಥರು.ಇವರು 'ಭಾಗವತ'ಕ್ಕೆ ಸರಳ ವ್ಯಾಖ್ಯಾನವನ್ನು ನೀಡಿರುವ ಮಹಾ ಪಂಡಿತರು. ಶ್ರೀಗಳು ಒಮ್ಮೆ ದೇವಾಲಯದ ಮುಂಭಾಗದಲ್ಲಿ ಮೂಲ ಭಾಗವತಕ್ಕೆ ತಾತ್ಪರ್ಯ ಬರೆಯುತಿದ್ದಾಗ ಸಮೀಪದ ಅಶ್ವಥ ಮರದ ಎಲೆಗಳ ಅಲುಗಾಟದಿಂದಾದ ಶಬ್ದವು ಅವರ ಏಕಾಗ್ರತೆಗೆ ಭಂಗ ಮಾಡಿತು.ಆಗ ಶ್ರೀಗಳು ತಮ್ಮ ಕೈಸನ್ನೆಯಿಂದ ಅದರ ಸದ್ದಡಗಿಸಿದ ವಿಚಿತ್ರ ಪವಾಡವು ಇಲ್ಲಿ ನಡೆದಿದೆ.ಈಗಲೂ ಶತಮಾನಗಳಷ್ಟು ಹಳೆಯದಾದ,ವಿಶಾಲವಾಗಿ ಹಬ್ಬಿ ಕೊಂಡಿರುವ ಆ ಅಶ್ವಥ ವೃಕ್ಷವು ಎಷ್ಟೇ ಜೋರಾದ ಗಾಳಿ ಬೀಸಿ ಎಲೆಗಳು ಎಷ್ಟು ಜೋರಾಗಿ ಅಲುಗಾಡಿದರೂ ಶಬ್ದ ಮಾಡದೇ ಇರುವುದನ್ನು ಕಾಣಬಹುದು. ಈ ಮರದ ಬುಡದಲ್ಲಿಯೇ ವಿಜಯಧ್ವಜ ತೀರ್ಥರ ವೃಂದಾವನ ಇದೆ.ಕೋದಂಡ ರಾಮನು ಇಲ್ಲಿಯ ಆರಾಧ್ಯ
ದೇವರಾದರೆ ಮುಖ್ಯಪ್ರಾಣ ದೇವರು ಇಲ್ಲಿಯ ಕಾರಣೀಕ ಮೂರ್ತಿ,ನಯನ ಮನೋಹರವೂ , ಕ್ಷಣಮಾತ್ರದ ಪ್ರಾರ್ಥನೆಯಿಂದ ಸಕಲ ದುರಿತ ನಿವಾರಣೆಯಾಗುವ ಸಾಲಿಗ್ರಾಮದಿಂದ ನಿರ್ಮಿತವಾದ ಮುಖ್ಯ ಪ್ರಾಣ ದೇವರ ವಿಗ್ರಹವನ್ನು ಶ್ರೀ ವಿಜಯಧ್ವಜ ತೀರ್ಥರು ಇಲ್ಲಿ ಪ್ರತಿಷ್ಠಾಪಿಸಿದರು ಎಂದು ತಿಳಿದುಬರುತ್ತದೆ. ಈ ವಿಗ್ರಹಗಳನ್ನು ನೋಡಿದ ನಯನಗಳು ಧನ್ಯ, ಮನಸ್ಸು ಇದನ್ನು ನೋಡಿದಾಗಲೇ ಭಾವವೇಶಕ್ಕೆ ಒಳಗಾಗಿ ಭಕ್ತಿ ಪರವಶವಾಗುತ್ತದೆ. ಉಡುಪಿ ಪೇಜಾವರ ಮಠದ ಆಡಳಿತಕ್ಕೆ ಒಳಪಟ್ಟ ಮೇಲೆ ಇಲ್ಲಿ ವಿಠಲ ದೇವರನ್ನು ಪ್ರತಿಷ್ಠಾಪಿಸಲಾಯಿತು. ಮಠದ ಪಕ್ಕದಲ್ಲಿಯೇ ಪುರಾತನವಾದ 'ಬ್ರಹ್ಮೇಶ್ವರ' ದೇವಸ್ಥಾನವಿದೆ. ಸಂಪೂರ್ಣವಾಗಿ ಮುರಕಲ್ಲಿನಿಂದ (ಕೆಂಪು ಕಲ್ಲು)ನಿರ್ಮಿತವಾದ ಇದು ಗಾತ್ರದಲ್ಲಿ ಚಿಕ್ಕದಾದರೂ ಕೆತ್ತನೆಯಲ್ಲಿ ಭವ್ಯವಾಗಿದೆ.
ಪೇಜಾವರ ಮಠದ ಹಿರಿಯ ಯತಿವರ್ಯರಾದ ಶ್ರೀ ವಿಶ್ವೇಶತೀರ್ಥರಿಗೆ ಅತೀ ಪ್ರೀಯ ಕ್ಷೇತ್ರವಾಗಿತ್ತು ಇದು ಎಂಬುವುದು ಹೆಮ್ಮೆಯ ವಿಷಯವಾಗಿದೆ.ಕಣ್ವತೀರ್ಥ ಮಠ.'ಭೂ ಸುಧಾರಣಾ ಕಾಯ್ದೆ ' ಜಾರಿಯಾದಾಗ ಮಠದ ಆಸ್ತಿಯನ್ನು ಸ್ವಯಂ ಪ್ರೇರಿತರಾಗಿ ದಾನ ಮಾಡಿದ ಹಿರಿಮೆ ಶ್ರೀ ವಿಶ್ವೇಶ ತೀರ್ಥರಿಗೆ ಹಾಗೂ ಕ್ರೇತ್ರಕ್ಕೆ ಸಲ್ಲುತ್ತದೆ. ಸ್ಪೂರ್ತಿಯ ಚಿಲುಮೆಯಾಗಿದ್ದ ಶ್ರೀ ವಿಶ್ವೇಶತೀರ್ಥರು ಈ ಕ್ಷೇತ್ರದ ಪ್ರತಿಯೊಂದು ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಠದ ಬೆನ್ನೆಲುಬಾಗಿ ನಿಂತಿದ್ದರು.ಅವರಿಗೆ ಈ ಕ್ಷೇತ್ರದ ಬಗ್ಗೆ ಕಾಳಚಿ ಎಷ್ಟಿತ್ತೆಂಬುದನ್ನು ಇಲ್ಲಿಗೆ ಬಂದೇ ನೋಡಬೇಕು.
ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಮಹಾದ್ವಾರ (ಸಧ್ಯದ ರಾಷ್ಟ್ರೀಯ ರಾಜ ರಸ್ತೆ ಅಭಿವೃದ್ಧಿ ಯಲ್ಲಿ ಮಹಾದ್ವಾರವನ್ನು ತೆರವು ಗೊಳಿಸಲಾಗಿದೆ.).
ಬ್ರಹ್ಮೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ. ಸುಮಾರು 30ವರ್ಷಗಳ ಹಿಂದೆ ಶಿಥಿಲಗೊಂಡು ನಾಶವಾದ ರಥ ಹೊಸದಾಗಿ ನಿರ್ಮಾಣ,ನೂರಾರು ವರ್ಷಗಳಷ್ಟು ಹಳೆಯದಾಗಿದ್ದ ಮಠದ ಗರ್ಭಗುಡಿಯ ಪುನರ್ನಿರ್ಮಾಣ, ಕಣ್ವತೀರ್ಥ ಕೆರೆಯ ನವೀಕರಣ, ಬ್ರಹ್ಮೇಶ್ವರ ದೇವಸ್ಥಾನದ ಪುನರ್ನಿರ್ಮಾಣ, ವಸತಿ ಗೃಹ ಹಾಗೂ ಸೀತಾರಾಮ ಧ್ಯಾನಮಂದಿರ, ಮುಂಭಾಗದ ಕಟ್ಟೆ ನವೀಕರಣ, ವೃಂದಾವನದ ಸುತ್ತುಗೋಪುರ,ಇದೀಗ ಮಠದ ಸುತ್ತುಗೋಪುರವೂ ನವೀಕರಣಗೊಂಡು ಊರು ಪರವೂರ,ದೇಶ ವಿದೇಶದ ಭಕ್ತರು ಬಂದು ಕಾಣುವ ತೀರ್ಥ ಕ್ಷೇತ್ರವಾಗಿ ಕಂಗೊಳಿಸುತ್ತಿದೆ.
ಸುಮಾರು 28-30 ವರ್ಷಗಳಿಂದೀಚೆಗೆ ನಡೆದ ಈ ಎಲ್ಲಾ ಅಭಿವೃದ್ಧಿಯ ಕೆಲಸದಲ್ಲಿ ಕ್ಷೇತ್ರದ ಶ್ರೀ ರಾಮಾಂಜನೇಯ ಸೇವಾ ಸಮಿತಿಯ ಕೊಡುಗೆಯು ಶ್ಲಾಘನೀಯ. ಧ್ಯಾನಮಂದಿರದಲ್ಲಿ ಸಭೆ, ಸಮಾರಂಭಗಳು, ಮದುವೆ, ಉಪನಯನ,ಸತ್ಸಂಗ,ಯೋಗ , ರಾಷ್ಟ್ರೀಯ ಹಬ್ಬಗಳ ಆಚರಣೆ,ಕಲೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವರಮಹಾಲಕ್ಷ್ಮಿಪೂಜೆ,,ಮಠದಲ್ಲಿ ಪ್ರತೀ ವಾರ ಭಜನೆ,ವಾರ್ಷಿಕ ನಗರ ಭಜನೆ ಯಂತಹ ದಾರ್ಮಿಕ ಕಾರ್ಯಗಳು ನಡೆಯುತ್ತಿರುತ್ತದೆ. ವರ್ಷಂಪ್ರತಿ ರಾಮನವಮಿಯ ದಿನದಂದು ಜಾತ್ರಾಮಹೋತ್ಸವವು ರಥೋತ್ಸವದೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯುತ್ತಾ ಬರುತ್ತಿದೆ.ಆಕ್ಷಯ ತೃತೀಯದಂದು ಆರಾಧನೆ, ನಾಗರ ಪಂಚಮಿ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಸಾರ್ವಜನಿಕ ರಂಗಪೂಜೆ, ಕಾರ್ತಿಕ ದೀಪೋತ್ಸವ, ಹನುಮ ಜಯಂತಿ, ವಿಷು ಆಚರಣೆಯಂತಹ ಧಾರ್ಮಿಕ ಕಾರ್ಯಗಳು ನಡೆಯುತ್ತಿರುತ್ತದೆ.ಅದೇ ರೀತಿ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ, ರಂಗಪೂಜೆ, ಶನೀಶ್ವರ ಪೂಜೆ ನಡೆಯುತ್ತದೆ.
ಇಲ್ಲಿ ರಾಮ ದೇವರಿಗೆ ರಂಗಪೂಜೆ,ಹಾಲುಪಾಯಸ, ಮುಖ್ಯಪ್ರಾಣ ದೇವರಿಗೆ ಪಂಚಾಮೃತ ಅಭಿಷೇಕ, ಬ್ರಹ್ಮೇಶ್ವರ ದೇವರಿಗೆ ಬಲಿಪಾಡು, ರುದ್ರಾಭಿಷೇಕವು ಪ್ರೀಯವಾಗಿದ್ದು ಭಕ್ತರು ತಮ್ಮ ಸಂಕಷ್ಟ ನಿವಾರಣೆಗೆ, ಇಷ್ಟಾರ್ಥ ಸಿದ್ಧಿಗಾಗಿ ಹರಕೆ ರೂಪದಲ್ಲಿ ಈ ಸೇವೆಯನ್ನು ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ್ವ ತೀರ್ಥರು ವೃಂದಾವನಸ್ಥರಾದ ನಂತರ ಈಗ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿಗಳು ಗುರುಗಳು ನಡೆಸಿಕೊಂಡು ಬಂದ ಎಲ್ಲಾ ಧರ್ಮಕಾರ್ಯಗಳನ್ನು ಅತಿ ಮುತುವರ್ಜಿಯಿಂದ ಮಾಡಿಕೊಂಡು ಇದೇ ಬರುವ 22-01-2024 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದು ಆ ಪುಣ್ಯಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂಬುವುದು ಕಣ್ವತೀರ್ಥದ ಭಕ್ತರಿಗೆ ಹೆಮ್ಮೆ ಹಾಗೂ ಸಂಬ್ರಮ ತಂದಿದೆ.ಅಯೋಧ್ಯೆಗೆ ತೆರಳುವ ಮೊದಲು ಶ್ರೀ ಗಳು ಕಣ್ವತೀರ್ಥಕ್ಕೆ ಭೇಟಿನೀಡಿ ರಾಮ ಸಮುದ್ರದಲ್ಲಿ ತೀರ್ಥ ಸ್ನಾನ ಗೈದು ಭಕ್ತರನ್ನು ಹರಸಿರುವರು.
ಆರಂಭದಲ್ಲಿ ಹೇಳಿದಂತೆ ಕಣ್ವತೀರ್ಥ ವು ಭೂಮಿಗೆ ಇಳಿದ ದೇವರ ಲೋಕ, ಶಿವ,ರಾಮ,ಹನುಮಂತ ತ್ರಿಮೂರ್ತಿ ಗಳು ನೆಲೆನಿಂತ ಪುಣ್ಯಕ್ಷೇತ್ರ,ಕಣ್ವ,ಮಧ್ವ, ವಿಜಯಧ್ವಜ, ವಿಶ್ವಮಾನ್ಯ, ವಿಶ್ವೇಶ್ವರ ತೀರ್ಥ ರಂತಹ ಮಹಾನ್ ಯತಿವರ್ಯರು ನಡೆದಾಡಿದ ಪುಣ್ಯದ ಮಣ್ಣು ,ಇದನ್ನು ಭೂಮಿಗೆ ಇಳಿದ ದೇವರ ಲೋಕವೆನ್ನದೆ ಬೇರೆ ಪದಗಳೇ ಇಲ್ಲ.ಈ ಪುಣ್ಯ ಕ್ಷೇತ್ರದ ಮಣ್ಣಿನಲ್ಲಿ ಹುಟ್ಟಿದ ನಾವೇ ಧನ್ಯರು.
ಪುರಾಣ ಪ್ರಸಿದ್ಧ ಕ್ಷೇತ್ರವಾದ ಕಣ್ವತೀರ್ಥ ಮಠ ಹಲವು ಪವಾಡಗಳಿಗೆ ಸಾಕ್ಷಿಯಾಗಿ ಭಾರತದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಮುಖ್ಯ ರಸ್ತೆಯಿಂದ ತುಂಬಾ ಒಳಗಿದ್ದು ಇಲ್ಲಿಗೆ ಬರುವ ಬಡ ಭಕ್ತರಿಗೆ ಅನುಕೂಲವಾಗುವಂತೆ ಒಂದೆರಡಾದರೂ ಸರಕಾರಿ ಬಸ್ಸುಗಳು ಇಲ್ಲಿಯವರೆಗೆ ಬರುವಂತಾದರೆ ಬಹಳ ಅನುಕೂಲ ಆಗಬಹುದು.ಈ ಬಗ್ಗೆ ಜನಪ್ರತಿನಿಧಿಗಳು ಸರಕಾರದ ಗಮನಕ್ಕೆ ತಂದರೆ ಉತ್ತಮವೆಂದು ಬಿನ್ನವಿಸುತ್ತಾ ಈ ಬರಹವನ್ನು ಶ್ರೀ ಸೀತಾರಾಮಾಂಜನೇಯರ ಚರಣಾರವಿಂದಗಳಿಗೆ ಅರ್ಪಿಸುತ್ತೇನೆ.
(ಸಂಗ್ರಹ ಲೇಖನ....ಕುವಿಕು ಕಣ್ವತೀರ್ಥ )
(ಶ್ರೀ ಕ್ಷೇತ್ರ ಕಣ್ವತೀರ್ಥ ಮಠದ ರಥ ಸಂಚಿಕೆಯಲ್ಲಿ ಶ್ರೀಯುತ ವಾಗೀಶ್ ಗಟ್ಟಿಗಾರು ರವರ ಶ್ರೀಕ್ಷೇತ್ರ ಕಣ್ವತೀರ್ಥ ಮಠ ಲೇಖನದ ಸಹಾಯವನ್ನು ಪಡೆಯಲಾಗಿದೆ, ಹಾಗೂ ಸಹಕರಿಸಿದ ಕ್ಷೇತ್ರದ ಅರ್ಚಕರು ಹಾಗೂ ರಾಮಾಂಜನೇಯ ಸೇವಾ ಸಮಿತಿಗೆ ಋಣಿಯಾಗಿರುವೆನು).









