ಬಂಟ್ವಾಳ: ವಿವಿಧ ಕ್ಷೇತ್ರಗಳಿಗೆ ಅನನ್ಯ ಕೊಡುಗೆ ನೀಡಿದ ಶ್ರೀ ಎಡನೀರು ಮಠಾಧೀಶರಾಗಿದ್ದ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳವರ ಸಂಸ್ಮರಣೆ ಹಾಗೂ ಹಿರಿಯ ಸಾಮಾಜಿಕ ನೇತಾರ ಎ.ಸಿ ಭಂಡಾರಿ ಅವರಿಗೆ ಅಭಿನಂದನಾ ಸಮಾರಂಭವು ಮಾ.6 ರಂದು ಬಿ.ಸಿ.ರೋಡ್ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಸಂಚಾಲನ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಅವರು ಹೇಳಿದ್ದಾರೆ.
ಮಂಗಳವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಂದು ಪೂರ್ವಾಹ್ನ 10 ಗಂಟೆಯಿಂದ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಮೋಹನ ಆಳ್ವ ರವರ ಅಧ್ಯಕ್ಷತೆಯಲ್ಲಿ ಈ ಸಮಾರಂಭ ನಢಯಲಿದೆ ಎಂದು ತಿಳಿಸಿದರು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರು ದೀಪೋಜ್ವಲನದ ಮೂಲಕ ಸಮಾರಂಭವನ್ನು ಉದ್ಘಾಟಿಸಲಿದ್ದರೆ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿಗಳು ಆಶೀರ್ವಚನಗೈಯಲಿದ್ದಾರೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಅಭಿನಂದನಾ ಗ್ರಂಥ ಬಿಡುಗಡೆ ಗೊಳಿಸಲಿದ್ದು, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ. ಶ್ಯಾಮ ಭಟ್ ಅವರು ಸಂಸ್ಕರಣಾ ಗ್ರಂಥ ಬಿಡುಗಡೆಗೊಳಿಸುವರು ಎಂದರು.
ಹಿರಿಯ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ಸಂಸ್ಕರಣಾ ಭಾಷಣ ಮಾಡಲಿದ್ದು, ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯನ ಕೇಂದ್ರದ ಅಧ್ಯಕ್ಷ ಪ್ರೊ, ಎಂ. ತುಕರಾಮ ಪೂಜಾರಿ ಅಭಿನಂದನಾ ಭಾಷಣ ಮಾಡುವರು,ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರುಗಳಾದ ರಾಜೇಶ್ ನಾಯ್ಕ್
ಉಳಿಪಾಡಿಗುತ್ತು, ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ. ರಮಾನಾಥ ರೈ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾನಿರ್ದೇಶಕ ಸತೀಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನದ ಬಳಿಕ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಅವರು ವಿವರಿಸಿದರು. ಧರ್ಮ,ಶಿಕ್ಷಣ,ಸಂಸ್ಕೃತಿ, ಸಾಹಿತ್ಯ,ಯಕ್ಷಗಾನ ಮೊದಲಾದ ಕ್ಷೇತ್ರಗಳಿಗೆ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳವರು ಅಪಾರವಾದ ಕೊಡುಗೆಯನ್ನು ನೀಡಿದ್ದು, ಬಂಟ್ವಾಳ ತಾಲೂಕಿನೊಂದಿಗೆ ಅವಿನಾಭಾವವಾದ ಸಂಬಂಧವನ್ನು ಹೊಂದಿದ್ದರು.ಈ ನಿಟ್ಟಿನಲ್ಲಿ ಅವರನ್ನು ಸ್ಮರಿಸುವ ಉದ್ದೇಶದಿಂದ ಅವರ ಸಂಸ್ಮರಣೆಯನ್ನು ಆಯೋಜಿಸಲಾಗಿದೆ ಎಂದ ಅವರು ಇದೇ ವೇದಿಕೆಯಲ್ಲಿ ಧಾರ್ಮಿಕ ಸಾಂಸ್ಕೃತಿಕ, ಕೃಷಿ, ಉದ್ಯಮ,ರಾಜಕೀಯ ಸಹಿತ ಹಲವು ಅಯಾಮಗಳಲ್ಲಿ ದುಡಿದು ಸಮಾಜಕ್ಕೆ ಸದ್ವಿಚಾರಗಳನ್ನು ನೀಡಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು,ಹಿರಿಯರು,ಸಮಭಾವ ವ್ಯಕ್ತಿತ್ವದ ಎ.ಸಿ.ಭಂಡಾರಿಯವರಿಗೆ ಅಭಿನಂದನೆಯನ್ನು ನಡೆಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಸಂಸ್ಮರಣಾ ಗ್ರಂಥದ ಸಂಪಾದಕ ರಾಜಮಣಿ ರಾಮಕುಂಜ, ಸಮಿತಿ ಪದಾಧಿಕಾರಿಗಳಾದ ಜಯರಾಮ್ ಪೂಜಾರಿ, ಕೃಷ್ಣ ಕುಮಾರ್ ಪೂಂಜ, ರಾಜಾ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.















