ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದು, ವಾರ್ಡ್ ನಂ ೫೯ರ ಬಿಜೆಪಿ ಪಾಲಿಕೆ ಸದಸ್ಯೆ ಮತ್ತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಂಬಂಧಿ ಸುನಂದಾ ಪಾಲನೇತ್ರ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್, JDS ಮೈತ್ರಿಯ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾದ ಹಿನ್ನೆಲೆ ಇಂದು ಚುನಾವಣೆ ನಡೆದಿತ್ತು.ಮೈಸೂರು ಮಹಾನಗರ ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮೇಯರ್ ಸ್ಥಾನ ಪಡೆದುಕೊಂಡಿದೆ.
ನಿರ್ಣಾಯಕ ಪಾತ್ರ ವಹಿಸಿದ್ದ ಜೆಡಿಎಸ್ ನಾಮಪತ್ರ ವಾಪಸ್ ಪಡೆಯಲಿಲ್ಲ. ಕಾಂಗ್ರೆಸ್ ತಮ್ಮ ಮತಗಳನ್ನು ತಮ್ಮ ಅಭ್ಯರ್ಥಿಗೆ ಚಲಾಯಿಸಿಕೊಂಡರು. ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ ಅವರಿಗೆ 26 ಮತಗಳು ಸಿಕ್ಕರೆ, ಕಾಂಗ್ರೆಸ್
ಅಭ್ಯರ್ಥಿ ಶಾಂತಕುಮಾರಿಗೆ 22 ಮತಗಳು ಸಿಕ್ಕಿವೆ.
ನೂತನ ಮೇಯರ್ ಸುನಂದಾ ಪಾಲನೇತ್ರ ಅವರಿಗೆ ಗೌನ್, ಹೂಗುಚ್ಛ ನೀಡಿ ಚುನಾವಣಾಧಿಕಾರಿ ಅಭಿನಂದಿಸಿದರು.
ಮಹಾನಗರ ಪಾಲಿಕೆಗೆ ಮೈಸೂರು ಉಸ್ತುರವಾರಿ ಸಚಿವ ಎಸ್.ಟಿ.ಸೋಮಶೇಖರ್ ಆಗಮಿಸಿದ್ದು, ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ಸಂಭ್ರಮಿಸಿದರು.ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಕೌನ್ಸಿಲ್ ಸಭಾಂಗಣದಲ್ಲಿ ಭಾರತ್ ಮಾತಾ ಕೀ ಜೈ ಎಂದು ಸಂಸದ ಪ್ರತಾಪ್ ಸಿಂಹ ಘೋಷಣೆ ಕೂಗುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.














