Coastal Bulletin

ಚಾಮರಾಜನಗರ:ಪ್ರೀತಿ ತಿರಸ್ಕರಿಸಿದಳು ಎಂಬ ಕಾರಣಕ್ಕೆ ಪ್ರೇಮಿಯೊಬ್ಬ ಹುಡುಗಿಯನ್ನು ತನ್ನ ಕಾರಿನಲ್ಲಿ ಕೂರಿಸಿ ಬೆಂಕಿ ಹಚ್ಚಿ ತಾನೂ ಸತ್ತು, ಆಕೆಯ ಸಾವಿಗೂ ಕಾರಣನಾದ ಘಟನೆ ಯಳಂದೂರಿನಲ್ಲಿ ನಡೆದಿದೆ.

ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಶ್ರೀನಿವಾಸ್ (23) ಹಾಗೂ ಕಾಂಚನಾ (22) ಮೃತಪಟ್ಟವರು. ಕಾರಿನ ಒಳಭಾಗಕ್ಕೆ ಪೆಟ್ರೋಲ್‌ ಹಾಕಿ ಬೆಂಕಿ ಹಾಕಲಾಗಿದ್ದು ಒಳಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಒಂದೇ ಸೀಟಿನಲ್ಲಿ ಇಬ್ಬರ ತಲೆಬುರುಡೆಗಳು ಮಾತ್ರ ಕಂಡು ಬಂದಿವೆ.ಅಗರ–ಮಾಂಬಳ್ಳಿ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ‌ ನಡೆಸುತ್ತಿದ್ದಾರೆ.

ಕಾಂಚನ ಅವರು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ನಿರ್ವಹಿಸುತ್ತಿದ್ದರು.ಶ್ರೀನಿವಾಸ್‌ ಕ್ಯಾಬ್ ಚಾಲಕನಾಗಿ ದುಡಿಯುತ್ತಿದ್ದ.ಶಿಕ್ಷಣ ಪಡೆಯುತ್ತಿದ್ದಾಗ ಇಬ್ಬರೂ ಸಹಪಾಠಿಗಳಾಗಿದ್ದರು. ಶ್ರೀನಿವಾಸ್‌,ಕಾಂಚನ ಅವರನ್ನು ಹಲವು ಸಮಯದಿಂದ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ.

‌ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶ್ರೀನಿವಾಸ್‌ ಅವರು ಕಾಂಚನ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಮಾಂಬಳ್ಳಿಯಿಂದ ಕಿನಕಳ್ಳಿಗೆ

ಹೋಗುವ ಮುಖ್ಯ ರಸ್ತೆಯಿಂದ ಎರಡು ಕಿ.ಮೀ ದೂರದಲ್ಲಿ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಒಳಗೆ ಕುಳಿತುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಕಾರು ಉರಿಯುತ್ತಿದ್ದುದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಸ್ಥಳಕ್ಕೆ ಪೊಲೀಸರು ಬಂದಾಗ ನಿಲ್ಲಿಸಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿರಬಹುದು ಎಂದು ಎಣಿಸಿದ್ದರು. ಆದರೆ, ಹತ್ತಿರ ಹೋಗಿ ಇಣುಕಿ ನೋಡಿದಾಗ ಒಳಗಡೆ ಒಂದೇ ಎರಡು ತಲೆ ಬುರುಡೆಗಳು ಕಂಡು ಬಂದವು. ಕಾರಿನ ಬಾಗಿಲು ಲಾಕ್‌ ಇತ್ತು. 

ಆರಂಭದಲ್ಲಿ ಪ್ರೇಮಿಗಳ ಆತ್ಮಹತ್ಯೆ ಎಂದು ಹೇಳಲಾಗಿತ್ತು. ಆದರೆ, ವಿಚಾರಣೆ ನಡೆಸಿದಾಗ ಶ್ರೀನಿವಾಸ್‌ ಅವರನ್ನು ಕಾಂಚನ ಇಷ್ಟಪಡುತ್ತಿರಲಿಲ್ಲ ಎಂಬುದು ಗೊತ್ತಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Leave a Comment