ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ವಿಫಲವಾದರೂ ಭಾರತೀಯರ ಹೆಮ್ಮೆಗೆ ಕಾರಣರಾಗಿರುವ ಹಾಕಿ ಆಟಗಾರ್ತಿಯರಿಗೆ ಸ್ವತಃ ಪ್ರಧಾನಿ ಮೋದಿಯವರೇ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಆಟಗಾರ್ತಿಯರು ಬಿಕ್ಕಿ ಬಿಕ್ಕಿ ಅತ್ತ ಘಟನೆ ವರದಿಯಾಗಿದೆ.
ಮೂರನೇ ಸ್ಥಾನಕ್ಕಾಗಿ ಬ್ರಿಟನ್ ವಿರುದ್ಧ ನಡೆದ ಪಂದ್ಯದಲ್ಲಿ ಎದುರಾದ ಸೋಲಿನಿಂದ ಆಘಾತಕ್ಕೊಳಗಾಗಿರುವ ಆಟಗಾರ್ತಿಯರು ಅತೀವ ದುಃಖಿತರಾಗಿದ್ದರು. ಆದರೂ ವೀಡಿಯೊ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ಆಟಗಾರ್ತಿಯರಿಗೆ ಧೈರ್ಯ ತುಂಬಿ, ಇಡೀ ದೇಶಕ್ಕೆ ನಿಮ್ಮ ಸಾಧನೆಯ ಬಗ್ಗೆ ಹೆಮ್ಮೆಯಿದೆ ಎಂದು ಪ್ರೋತ್ಸಾಹಿಸಿದ್ದಾರೆ.
'ನೀವೆಲ್ಲರೂ ಅದ್ಭುತ ಆಟವಾಡಿದ್ದು, ಸಾಕಷ್ಟು ಬೆವರು ಸುರಿಸಿದ್ದೀರಿ. ಕಳೆದ 5-6 ವರ್ಷಗಳಿಂದ
ನೀವು ಪಟ್ಟ ಪರಿಶ್ರಮವು ದೇಶದ ಕೋಟ್ಯಂತರ ಹೆಣ್ಮಕ್ಕಳಿಗೆ ಪ್ರೇರಣೆಯಾಗಿದೆ. ಇದಕ್ಕಾಗಿ ತಂಡದ ಎಲ್ಲ ಆಟಗಾರ್ತಿಯರು ಹಾಗೂ ಕೋಚ್‌ಗೆ ಅಭಿನಂದನೆ ಸಲ್ಲಿಸುತ್ತೇನೆ' ಎಂದು ಹೇಳಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ಆಟಗಾರ್ತಿಯರು ಪದಕ ಗೆಲ್ಲುವಲ್ಲಿ ವಿಫಲವಾಗಿದ್ದರೂ, ಪ್ರಧಾನಿ ಮೋದಿಯವರು ಸ್ವತಃ ಕರೆ ಮಾಡಿ ಅವರ ಪ್ರಯತ್ನವನ್ನು ಶ್ಲಾಘಿಸಿರುವುದು ತಂಡಕ್ಕೆ ನಿಜವಾದ ಸ್ಪೂರ್ತಿಯಾಗಲಿದೆ.















