ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ಸೇನಾ ಪಡೆ ಇಬ್ಬರು ಉಗ್ರರನ್ನು ಸದೆಬಡಿದಿದೆ. ಶನಿವಾರ ಬೆಳ್ಳಂಬೆಳಗ್ಗೆ ಈ ಎನ್ ಕೌಂಟರ್ ನಡೆದಿದೆ.
ಪುಲ್ವಾಮಾ ಜಿಲ್ಲೆಯ ನಾಗ್ ಬೆರಾನ್- ತರ್ಸಾರ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ದೊರೆತ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಹತ್ಯೆಗೈದಿದೆ. ಹತರಾದ ಉಗ್ರರ ಗುರುತು ಪತ್ತೆಯಾಗಿಲ್ಲ.
ಈ ಬಗ್ಗೆ ಮಾಹಿತಿ ನೀಡಿದ ಕಾಶ್ಮೀರ ಝೋನ್ ಪೋಲೀಸರು 'ನಮೀಬಿಯನ್ ಮತ್ತು
ಮರ್ಸರ್ ನ ನಡುವೆ ಈ ಕಾಳಗ ನಡೆದಿದೆ,ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಅಡಗಿ ಕುಳಿತಿದ್ದ ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ. ಕೂಡಲೇ ಪ್ರತಿದಾಳಿ ಆರಂಭಿಸಿದ ಸೇನಾಪಡೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ' ಎಂದಿದ್ದಾರೆ.















