ಬಂಟ್ವಾಳ :ತಾಲೂಕಿನ ಸೋರ್ಣಾಡು ಸಮೀಪದ ಅರಳ ಗ್ರಾಮದ ಅರ್ಬಿ ನಿವಾಸಿ ಐವನ್ ಪಿಂಟೋ ಎಂಬವರ ಜಮೀನಿನಲ್ಲಿ ಮಂಗಳೂರು_ಬೆಂಗಳೂರು ನಡುವೆ ಹಾದು ಹೋಗಿರುವ ಎಚ್ ಪಿ ಸಿ ಎಲ್ ಪೆಟ್ರೋನೆಟ್ ಸಂಸ್ಥೆಯ ಡಿಸೇಲ್ ಪೂರೈಸುವ ಪೈಪ್ ಲೈನ್ ಗೆ ಕನ್ನ ಕೊರೆದು ಲಕ್ಷಾಂತರ ಮೌಲ್ಯದ ಡಿಸೇಲ್ ಕಳವು ಮಾಡುವ ದಂಧೆ ಶುಕ್ರವಾರ ರಾತ್ರಿ ಪತ್ತೆಯಾಗಿದೆ.
ಸುಮಾರು 15 ಅಡಿ ಆಳಕ್ಕೆ ಹಿಟಾಚಿ ಮೂಲಕ ಅಗೆದು ನೋಡಿದಾಗ ಅಕ್ರಮವಾಗಿ ಗೇಟ್ ವಾಲ್ ಮತ್ತು ಪೈಪ್ ಅಳವಡಿಕೆ ಮಾಡಿರುವುದು ಕಂಡು ಬಂದಿದೆ. ಇನ್ನೊಂದು ಗೇಟ್ ವಾಲ್ ಐವನ್ ಪಿಂಟೋ ಅವರ ಅಡಿಕೆ ತೋಟದ ಬಳಿ
ಪತ್ತೆಯಾಗಿ ರುವುದಾಗಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಲಕ್ಷಾಂತರ ಮೌಲ್ಯದ ಡಿಸೇಲ್ ಕಳವು ಆಗಿರುವ ಸಾಧ್ಯತೆಯಿದ್ದು, ಇದರಲ್ಲಿ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಕೂಡಾ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.















