Coastal Bulletin

ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್‌ ತಂಡ ಅನುಭವಿ ಬ್ಯಾಟರ್‌ ಹಾಗೂ ವಿಶ್ವ ಕ್ರಿಕೆಟ್‌ನ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್‌ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿಗೆ ಬುಧವಾರ ಹಠಾತ್‌ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಮಿಥಾಲಿ ತಮ್ಮ ನಿವೃತ್ತಿ ವಿಚಾರವನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ."ವರ್ಷಗಳಿಂದ ನಿಮ್ಮ ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು! ನಿಮ್ಮ ಆಶೀರ್ವಾದ ಮತ್ತು ಬೆಂಬಲದೊಂದಿಗೆ ನಾನು ನನ್ನ 2 ನೇ ಇನ್ನಿಂಗ್ಸ್ ಅನ್ನು ಎದುರು ನೋಡುತ್ತಿದ್ದೇನೆ" ಎಂದು ಮಿಥಾಲಿ ಟ್ವೀಟ್ ಮಾಡಿದ್ದಾರೆ.

1999ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಹೈದರಾಬಾದ್‌ ಮೂಲದವರಾದ ಅನುಭವಿ ಬಲಗೈ ಬ್ಯಾಟರ್‌ ಮಿಥಾಲಿ ರಾಜ್‌, ಬರೋಬ್ಬರಿ 23 ವರ್ಷಗಳ ಕಾಲ ಟೀಮ್ ಇಂಡಿಯಾ ಪರ ಬ್ಯಾಟ್‌ ಬೀಸಿದ್ದಾರೆ. 37 ವರ್ಷದ ಆಟಗಾರ್ತಿ ಇದೇ ವರ್ಷ ನ್ಯೂಜಿಲೆಂಡ್‌ ಆತಿಥ್ಯದಲ್ಲಿ ನಡೆದ ಐಸಿಸಿ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ, ಲೀಗ್‌ ಹಂತದಲ್ಲಿ ನೀಡಿದ ನೀರಸ ಪ್ರದರ್ಶನ ಕಾರಣ ಭಾರತ ಮಹಿಳಾ ಕ್ರಿಕೆಟ್‌ ತಂಡ ಸೆಮಿಫೈನಲ್ಸ್‌ ಹಂತಕ್ಕೆ

ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಇದರೊಂದಿಗೆ ವಿಶ್ವಕಪ್‌ ಗೆದ್ದುಕೊಟ್ಟು ನಿವೃತ್ತಿ ಘೋಷಿಸುವ ಅವರ ಕನಸು ಭಗ್ನವಾಗಿತ್ತು.

ಅಂದಹಾಗೆ ಇದಕ್ಕೂ ಮೊದಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿಬದುಕಿಗೆ ಅವರು ತೆರೆ ಎಳೆದಿದ್ದರು. ಇನ್ನು ತಮ್ಮ ಸುದೀರ್ಘಾವಧಿಯ ಕ್ರಿಕೆಟ್‌ ವೃತ್ತಿಬದುಕಿನಲ್ಲಿ ಹಲವು ದಾಖಲೆಗಳನ್ನು ನಿರ್ಮಸಿರುವ ಮಿಥಾಲಿ ರಾಜ್‌, ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲಿ ಎಲ್ಲಾ ಮಾದರಿಯಲ್ಲಿ (ಟೆಸ್ಟ್‌ ಕ್ರಿಕೆಟ್‌, ಏಕದಿನ ಕ್ರಿಕೆಟ್, ಒಡಿಐ ಕ್ರಿಕೆಟ್‌) ಅತ್ಯಧಿಕ ರನ್‌ ಗಳಿಸಿದ ಮಹಿಳಾ ಬ್ಯಾಟರ್‌ ಎಂಬ ವಿಶ್ವ ದಾಖಲೆ ಹೊಂದಿದ್ದಾರೆ.

Leave a Comment