ಅನೈತಿಕ ಸಂಬಂಧ ಶಂಕೆ; ಮುಂಬೈನಿಂದ ಕರೆಸಿ 3 ವರ್ಷದ ಮಗು ಎದುರೇ ದಂಪತಿ ಕೊಲೆ

Coastal Bulletin
ಅನೈತಿಕ ಸಂಬಂಧ ಶಂಕೆ; ಮುಂಬೈನಿಂದ ಕರೆಸಿ 3 ವರ್ಷದ ಮಗು ಎದುರೇ ದಂಪತಿ ಕೊಲೆ

ಬೀದರ್: ಅನೈತಿಕ ಸಂಬಂಧ ಸಂಶಯ ಹಿನ್ನೆಲೆಯಲ್ಲಿ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ಕೊಹಿನೂರು ಪಹಾಡ ಬಳಿ ಮಂಗಳವಾರ ನಡೆದಿದೆ.

ತಾಲೂಕಿನ ಜಾಫರವಾಡಿ ನಿವಾಸಿ ರಾಜು ಕಾಂತಪ್ಪ ಕೊಳಸೂರೆ (28) ಹಾಗೂ ಆತನ ಪತ್ನಿ ಶಾರದಾ (24) ಕೊಲೆಯಾದ ದಂಪತಿ. ತಾಲೂಕಿನ ಯರಂಡಗಿ ಗ್ರಾಮದ ದತ್ತಾತ್ರೇಯ ವಾಲೆ ಹಾಗೂ ತುಕಾರಾಮ ಚಿಟಂಪಲ್ಲೆ ಕೊಲೆ ಆರೋಪಿಗಳು. ಕೊಲೆಯಾದ ರಾಜು ಆರೋಪಿ ದತ್ತಾತ್ರೇಯನ ಸಹೋದರಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎನ್ನುವ ಸಂಶಯದ ಮೇಲೆ ಕೃತ್ಯ ನಡೆದಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಪತ್ನಿಯೊಂದಿಗೆ ಮುಂಬೈಗೆ ತೆರಳಿದ್ದ ರಾಜುನನ್ನು ಕೊಲೆ ಮಾಡಲು ಸಂಚು ರೂಪಿಸಿದ ಆರೋಪಿಗಳು, ಯುವತಿ ಕಡೆಯಿಂದ ಮೊಬೈಲ್‌ ಕರೆ ಮಾಡಿಸಿ ಆತನನ್ನು ಕರೆಸಿಕೊಂಡಿದ್ದಾರೆ. ಬಳಿಕ ದಂಪತಿಯನ್ನು ಕೊಹಿನೂರು ಪಹಾಡ ಬಳಿ ಮಾರ್ಗದ ಮಧ್ಯೆ ಮಾತನಾಡುವ ನೆಪದಲ್ಲಿ ಗ್ರಾಮದ ಹೊರವಲಯಕ್ಕೆ

ಕರೆದುಕೊಂಡು ಹೋಗಿ ಮಚ್ಚಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಕೊಲೆ ಮಾಡಿದ ಇಬ್ಬರು ಯುವಕರು ಹಾಗೂ ಆರೋಪಿಯ ಸಹೋದರಿ ಸೇರಿದಂತೆ ಮೂವರ ವಿರುದ್ದ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್, ಸಿಪಿಐ ಕೃಷ್ಣಕುಮಾರ ಪಾಟೀಲ್, ಪಿಎಸ್ಐ ಸುವರ್ಣ ಮಲಶೆಟ್ಟಿ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಗು ಎದುರೇ ಪಾಲಕರ ಹತ್ಯೆ: ಕೊಲೆಯಾದ ದಂಪತಿಗೆ ಮೂರು ವರ್ಷದ ಪುಟ್ಟ ಮಗುವಿದೆ. ಏನೂ ಅರಿಯದ ಮಗುವಿನ ಮುಂದೆಯೇ ಪಾಲಕರನ್ನು ಕೊಲೆ ಮಾಡಲಾಗಿದೆ. ತಂದೆ, ತಾಯಿಯನ್ನು ಕಳೆದುಕೊಂಡ ಮಗು ಕೊಲೆಯಾದ ಸ್ಥಳದಲ್ಲಿ ಅನಾಥವಾಗಿ ಕುಳಿತಿದ್ದ ದೃಶ್ಯ ನೋಡುಗರ ಮನಕಲಕುವಂತಿತ್ತು.

Leave a Comment