ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಸುಗ್ರೀವಾಜ್ಞೆ ಸೇರಿ ಮೂರು ಸುಗ್ರೀವಾಜ್ಞೆಗಳಿಗೆ ರಾಜ್ಯಪಾಲರ ಅಂಕಿತ

Coastal Bulletin
ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಸುಗ್ರೀವಾಜ್ಞೆ ಸೇರಿ ಮೂರು ಸುಗ್ರೀವಾಜ್ಞೆಗಳಿಗೆ ರಾಜ್ಯಪಾಲರ ಅಂಕಿತ

ಬೆಂಗಳೂರು: ಗಿಗ್ ಕಾರ್ಮಿಕರ ಸಾಮಾಜಿಕ‌ ಭದ್ರತೆ ಕಲ್ಪಿಸುವ ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ಅಧ್ಯಾದೇಶ, 2025ಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರ ಇದೀಗ ಅಧಿಸೂಚನೆ ಹೊರಡಿಸಿದೆ.

ಈ ಸುಗ್ರೀವಾಜ್ಞೆಯಿಂದ ಪ್ಲಾಟ್‌ಫಾರ್ಮ್ ಆಧಾರಿತ ಸೇವೆಗಳಾದ ಸ್ವಿಗ್ಗಿ, ಜೊಮಾಟೊಗಳಲ್ಲಿ ಫುಡ್‌ ಡೆಲವರಿ ಮಾಡುವ, ರೈಡ್‌ ಶೇರಿಂಗ್‌ ಸೇವೆಗಳಾದ ಓಲಾ, ಉಬರ್‌, ರ್‍ಯಾಪಿಡೋ ಯಾತ್ರಿ ಇತ್ಯಾದಿ ಅಪ್ಲಿಕೇಷನ್ ಆಧಾರಿತ ಚಾಲಕರು, ಇ–ಕಾಮರ್ಸ್‌ ಸಂಸ್ಥೆಗಳಾದ ಅಮೆಜಾನ್‌, ಪ್ಲಿಪ್‌ಕಾರ್ಟ್‌, ಬಿಗ್‌ ಬಾಸ್ಕೆಟ್‌ ಮತ್ತಿತ್ತರ ಕ್ಷೇತ್ರಗಳಲ್ಲಿ ಪೂರ್ಣಕಾಲಿಕ ಅಥವಾ ಅರೆಕಾಲಿಕ ಡೆಲವರಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು, ಕಾರ್ಮಿಕ ಕಾನೂನುಗಳಡಿ ಲಭ್ಯವಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲಿದ್ದಾರೆ.

ರಾಜ್ಯ ಸರ್ಕಾರ ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಂಡಳಿಯನ್ನು ರಚಿಸಬೇಕು. ಈ ಮಂಡಳಿಗೆ ಕಾರ್ಮಿಕ ಸಚಿವರು ಅಧ್ಯಕ್ಷರಾಗಿರಲಿದ್ದಾರೆ. ಮಂಡಳಿಯಲ್ಲಿ ಅಧ್ಯಕ್ಷರು ಸೇರಿ 9 ಮಂದಿ ಸದಸ್ಯರಿರಲಿದ್ದಾರೆ. ಸಂಗ್ರಹಕಾರರು ಅಥವಾ ವೇದಿಕೆಗಳು ತಮ್ಮಲ್ಲಿ ಕಾರ್ಯನಿರ್ವಹಿಸುತ್ತಿರುವ ಅಥವಾ ನೋಂದಾಯಿಸಿದ ಎಲ್ಲಾ ಗಿಗ್ ಕಾರ್ಮಿಕರ ದತ್ತಾಂಶವನ್ನು ಈ ಅಧ್ಯಾದೇಶದ ಪ್ರಾರಂಭದ ದಿನಾಂಕದಿಂದ ನಲವತ್ತೈದು ದಿನಗಳೊಳಗಾಗಿ ನಿಯಮಿಸಬಹುದಾದಂಥ ವಿಧಾನದಲ್ಲಿ ಮಂಡಳಿಗೆ ಒದಗಿಸಬೇಕು. ಯಾವುದೇ ವೇದಿಕೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಥವಾ ನೋಂದಾಯಿಸಿದ ಎಲ್ಲಾ ವೇದಿಕೆ ಆಧಾರಿತ ಗಿಗ್ ಕಾರ್ಮಿಕರು ಈ ಅಧ್ಯಾದೇಶದ ಪ್ರಾರಂಭದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ವಿದ್ಯುನ್ಮಾನದ ಮೂಲಕ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕು.

ಸರ್ಕಾರವು, ನೋಂದಾಯಿಸಿದ ವೇದಿಕೆ ಆಧಾರಿತ ಗಿಗ್ ಕಾರ್ಮಿಕರಿಗಾಗಿ ಕರ್ನಾಟಕ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಸಂಗ್ರಹಕಾರರು ಅಥವಾ ವೇದಿಕೆಗಳಿಂದ "ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಕ್ಷೇಮಾಭಿವೃದ್ಧಿ ಶುಲ್ಕ" ವೆಂದು ಕರೆಯುವ ಕ್ಷೇಮಾಭಿವೃದ್ಧಿ ಶುಲ್ಕವನ್ನು ವಿಧಿಸಬೇಕು. ಅಧ್ಯಾದೇಶವು ಜಾರಿಗೆ ಬಂದ ಆರು ತಿಂಗಳೊಳಗಾಗಿ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಪ್ರತಿಯೊಂದು ವಹಿವಾಟಿನಲ್ಲಿ ಪಾವತಿ ನೀಡಿಕೆಯ ಶೇಕಡಾ ಒಂದರಷ್ಟಕ್ಕೆ ಕಡಿಮೆಯಲ್ಲದ, ಆದರೆ, ಶೇಕಡಾ ಐದರಷ್ಟನ್ನು ಮೀರದಂತೆ ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುವುದು. ಗಿಗ್‌ ಕಾರ್ಮಿಕರು ಅಪಘಾತದಿಂದ ಮರಣ ಹೊಂದಿದರೆ ಅಪಘಾತ ಪರಿಹಾರ ಮತ್ತು ಜೀವ ವಿಮೆ ಸೇರಿ ₹4 ಲಕ್ಷ ಮತ್ತು ₹2 ಲಕ್ಷ ಮೊತ್ತದ ಜೀವ ವಿಮೆ ಒದಗಿಸಲಾಗುವುದು.‌

ಕಡ್ಡಾಯ ಗ್ರಾಮೀಣ ಸೇವೆ ಸಡಿಲಗೊಳಿಸುವ ಸುಗ್ರೀವಾಜ್ಞೆ: ಗ್ರಾಮೀಣ ಸೇವೆ

ಸಡಿಲಗೊಳಿಸುವ ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ಅಧ್ಯಾದೇಶ, 2025ಕ್ಕೂ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ಎಂಬಿಬಿಎಸ್‌ ವೈದ್ಯರ ಗ್ರಾಮೀಣ ಸೇವೆ ಕಡ್ಡಾಯ ನಿಯಮ ಸಡಿಲಗೊಳಿಸಿ ನಗರ ಪ್ರದೇಶದಲ್ಲಿಯೂ ಸೇವೆ ಸಲ್ಲಿಸಲು ಅನುಕೂಲ ಮಾಡಿಕೊಡುವ ಸುಗ್ರೀವಾಜ್ಞೆ ಇದಾಗಿದೆ. ಗ್ರಾಮೀಣ ಭಾಗದಲ್ಲಿ 1500ಕ್ಕೂ ಹೆಚ್ಚು ಹುದ್ದೆಗಳಲ್ಲಿ ಮಾತ್ರ ಸೇವೆ ಸಲ್ಲಿಸಲು ಅವಕಾಶ ಇರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಸೇವೆ ಕಡ್ಡಾಯವನ್ನು ಸಡಿಲಗೊಳಿಸಿ ನಗರ ಪ್ರದೇಶಕ್ಕೂ ಅವಕಾಶ ಕಲ್ಪಿಸಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿನ ಖಾಲಿ ಸ್ಥಾನಗಳನ್ನು ಆದ್ಯತೆಯ ಮೇಲೆ ತುಂಬಬೇಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಖಾಲಿ ಹುದ್ದೆಗಳಿಗಿಂತ ಹೆಚ್ಚಿನ ಅಭ್ಯರ್ಥಿಗಳ ಸಂಖ್ಯೆಯಿರುವ ಸಂದರ್ಭದಲ್ಲಿ ನಗರ ಪ್ರದೇಶಗಳಲ್ಲಿನ ಖಾಲಿ ಸ್ಥಾನಗಳಿಗೆ ಒಂದು ವರ್ಷದ ಕಡ್ಡಾಯ ಸೇವೆ ಸಲ್ಲಿಸಲು ಅಭ್ಯರ್ಥಿಗಳನ್ನು ಸ್ಥಳ ನಿಯುಕ್ತಿಗೊಳಿಸಬಹುದಾಗಿದೆ‌. ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯ ಸೇವೆಗಾಗಿ ಸರ್ಕಾರ ನಿರ್ದಿಷ್ಟಪಡಿಸಿದ ಅಸ್ತಿತ್ವದಲ್ಲಿರುವ ಖಾಲಿ ಸ್ಥಾನಗಳನ್ನು ತುಂಬುವಾಗ, ಸರ್ಕಾರಿ ಕೋಟಾ ಸೀಟುಗಳಡಿ ವೈದ್ಯಕೀಯ ಕೋರ್ಸು ಉತ್ತೀರ್ಣರಾದ ಅಭ್ಯರ್ಥಿಗಳನ್ನು ಆದ್ಯತೆಯ ಮೇಲೆ ತುಂಬಬೇಕು‌. ಉಳಿದ ಖಾಲಿ ಸ್ಥಾನಗಳನ್ನು ಸಾಂಸ್ಥಿಕ ಸೀಟುಗಳಡಿ ವೈದ್ಯಕೀಯ ಕೋರ್ಸುಗಳನ್ನು ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಂದ ತುಂಬಬಹುದು ಮತ್ತು ಹೆಚ್ಚುವರಿ ಅಭ್ಯರ್ಥಿಗಳನ್ನು ಕಡ್ಡಾಯ ಸೇವೆಯಿಂದ ವಿನಾಯಿತಿಗೊಳಿಸಬಹುದಾಗಿದೆ.

ಕೌನ್ಸೆಲಿಂಗ್ ಮೂಲಕ ವೈದ್ಯಾಧಿಕಾರಿಗಳ ವರ್ಗಾವಣೆ: ಕೌನ್ಸಿಲಿಂಗ್ ಮೂಲಕ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಾವಣೆ ಮಾಡಲು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧ್ಯಾದೇಶ, 2025ಕ್ಕೂ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.‌

ಇದೆ ಪ್ರಕಾರ ವೈದ್ಯಾಧಿಕಾರಿ ಮತ್ತು ಇತರ ಸಿಬ್ಬಂದಿಯ ಶೇ. 15ರಷ್ಟು ವರ್ಗಾವಣೆ ಮಾಡಲು ಅವಕಾಶ ಇದೆ. ಗ್ರಾಮೀಣ ಪ್ರದೇಶದಲ್ಲಿ ನಿಗದಿಪಡಿಸಿದಷ್ಟು ಕರ್ತವ್ಯವನ್ನು ಸಲ್ಲಿಸದ ವೈದ್ಯಾಧಿಕಾರಿ ಅಥವಾ ಸಿಬ್ಬಂದಿಯನ್ನು ಗ್ರಾಮೀಣ ಪ್ರದೇಶಗಳಲ್ಲಿರುವ ಹುದ್ದೆಗೇ ವರ್ಗಾವಣೆ ಮಾಡಬೇಕು. ವಿಶೇಷ ತಜ್ಞ ವೈದ್ಯರು, ಹಿರಿಯ ವಿಶೇಷ ತಜ್ಞ ವೈದ್ಯರನ್ನು ಅವರು ಹೊಂದಿರುವ ವಿಶೇಷ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಗುರುತಿಸಿದ ಹುದ್ದೆಗೆ ವರ್ಗಾವಣೆ ಮಾಡಬೇಕು. ಮಹತ್ವದ ಖಾಲಿ ಹುದ್ದೆಗಳಿಗೆ ಕೌನ್ಸೆಲಿಂಗ್‌ ಇಲ್ಲದೆಯೂ ನಿಯೋಜಿಸಬಹುದಾಗಿದೆ‌.

Leave a Comment