ಅಂತರಾಷ್ಟ್ರೀಯ ಯೋಗ ದಿನಾಚರಣೆ : ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗಾಭ್ಯಾಸ.

Coastal Bulletin
ಅಂತರಾಷ್ಟ್ರೀಯ ಯೋಗ ದಿನಾಚರಣೆ : ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗಾಭ್ಯಾಸ.

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಅಂಗಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆ ಮಾಡಲಾಗಿದ್ದು, ಮೋದಿಯವರು ಓಂಕಾರ ಉಚ್ಛಾರಣೆ ಮತ್ತು ಸಂಸ್ಕತ ಶ್ಲೋಕದೊಂದಿಗೆ ಯೋಗಭ್ಯಾಸ ನಡೆಸಿದರು.

ಮಂಗಳವಾರ ಬೆಳಗ್ಗೆ 6.20ಕ್ಕೆ ರಾಡಿಸನ್‌ ಬ್ಲ್ಯೂ ಹೊಟೇಲ್‌ನಿಂದ ಹೊರಟ ಮೋದಿ ಅವರು 6.30ಕ್ಕೆ ಅರಮನೆ ಆವರಣ ಪ್ರವೇಶ ಮಾಡಿದರು. ಬಳಿಕ‌ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜನರ ಜೊತೆಗೆ ಮ್ಯಾಟ್ ಮೇಲೆ ಮೋದಿ ಯೋಗಾಭ್ಯಾಸ ನಡೆಸಿದರು.

ಕುತ್ತಿಗೆ ಸಡಿಲಗೊಳಿಸುವ, ಕುತ್ತಿಗೆ ತಿರುಗಿಸುವ ಮತ್ತು ಇತರ ಸರಳ ಉಸಿರಾಟದ ವ್ಯಾಯಾಮಗಳೊಂದಿಗೆ ಮೈಸೂರಿನಲ್ಲಿ ಇಂದು ಯೋಗಾಭ್ಯಾಸ ಆರಂಭವಾಯಿತು. ನಂತರ ತಾಡಾಸನ, ವೃಕ್ಷಾಸನ, ಅರ್ಧ ಚಕ್ರಾಸನ ಸೇರಿದಂತೆ ಹಲವು ಯೋಗಾಸನಗಳನ್ನು ಸಾವಿರಾರು ಜನರೊಂದಿಗೆ ಮೋದಿ ಅವರೂ ಮಾಡಿದರು. ವೃಕ್ಷಾಸನವು ತಾಯಿ ಚಾಮುಂಡಿಗೆ ಶರಣಾಗತಿ ಮತ್ತು ಆರಾಧನೆಯ ಭಾವವನ್ನು ಪ್ರದರ್ಶಿಸಿತು.

ಬಳಿಕ  ಕಾರ್ಯಕ್ರಮವು ಕಪಾಲಭಾತಿ, ಪ್ರಾಣಾಯಾಮಗಳ ಅಭ್ಯಾಸದೊಂದಿಗೆ ಕೊನೆಯ ಘಟ್ಟಕ್ಕೆ ತಲುಪಿತು. ದೇಶದ ವಿಕಾಸಕ್ಕಾಗಿ ತನುಮನಧನಗಳ ಅರ್ಪಣೆಯ ಸಂಕಲ್ಪದೊಂದಿಗೆ ಶಾಂತಿಪಾಠವನ್ನು ಪ್ರಧಾನಿ ಮೋದಿ ಉಚ್ಛರಿಸಿದರು.

ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಃ, ಸರ್ವೇ ಭದ್ರಾಣಿ ಪಶ್ಯಂತು, ಮಾ ಕಶ್ಚಿತ್ ದುಃಖ ಭಗ್​ ಭವೇತ್ ಎಂದು ಮೋದಿಯವರು ಸಂಕಲ್ಪ ಮತ್ತು ಶಾಂತಿಪಾಠವನ್ನು ಉಚ್ಚರಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, "ಈ ಹಿಂದೆ ಯೋಗದ ಸಂಕೇತವು ಆಧ್ಯಾತ್ಮಿಕ ಸ್ಥಳಗಳು ಅಥವಾ ಸಾಂಪ್ರದಾಯಿಕ ಮನೆಗಳಂತಹ ಸ್ಥಳಗಳಲ್ಲಿ ಮಾತ್ರ ಕಾಣುತ್ತಿತ್ತು. ಆದರೆ ಇಂದು ಇದು ಜಗತ್ತಿನ ಮೂಲೆ ಮೂಲೆಯಲ್ಲಿ ಕಾಣುತ್ತಿದೆ. ಯೋಗವು ವಿಶ್ವ ಕರ್ಮವಾಗಿದೆ, ಪ್ರಪಂಚದ ಎಲ್ಲೆಡೆ ಯೋಗವನ್ನು ಮಾಡಲಾಗುತ್ತಿದೆ. ಯೋಗವು ನಮಗೆ, ನಮ್ಮ ದೇಶಕ್ಕೆ, ನಮ್ಮ ಜಗತ್ತಿಗೆ ಶಾಂತಿಯನ್ನು ತರುತ್ತದೆ" ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನಿ ಜೊತೆ ಮಹಾರಾಜರಾದ ಯಧುವೀರ್, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲರು, ಉಸ್ತುವಾರಿ ಸಚಿವರು ಹಾಗೂ ಆಯುಷ್ ಇಲಾಖೆಯ ಸಚಿವರು ಹಾಗೂ ಸುಮಾರು 15 ಸಾವಿರ ಜನರೂ ಪಾಲ್ಗೊಂಡಿದ್ದರು.

Leave a Comment