ಬೆಳಗಾವಿ: ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಯಾವುದೇ ರಾಜಕೀಯ ವಿಶೇಷತೆ ಇಲ್ಲ. ಅದು ಕೇವಲ ಸೌಜನ್ಯದ ಭೇಟಿ. ಪಕ್ಷದ ಸಂಘಟನೆ ಮತ್ತು ಸರ್ಕಾರದ ಕೆಲಸಗಳ ಬಗ್ಗೆ ಚರ್ಚಿಸಲು ಭೇಟಿಯಾಗುವುದು ಸಹಜ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಅಥವಾ ಪಕ್ಷದ ಸಂಘಟನೆ ದೃಷ್ಟಿಯಿಂದ ಅಲ್ಪಸಂಖ್ಯಾತ ಮುಖಂಡರನ್ನು ಪಕ್ಷದಿಂದ ದೂರವಿಟ್ಟಿದ್ದು ಅಥವಾ ಹೊರಹಾಕಿದ್ದು ಸರಿಯಲ್ಲ ಎಂಬ ತಮ್ಮ ಅಭಿಪ್ರಾಯವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ತಿಳಿಸಿದ್ದೇನೆ. ಈ ವಿಷಯದ ಕುರಿತು ಸುದೀರ್ಘವಾಗಿ ಚರ್ಚಿಸಿದ್ದು, ನಡೆದಿರುವ ಲೋಪದೋಷಗಳನ್ನು ಗಮನಿಸಿದ್ದೇನೆ. ಮುಂದಿನ ದಿನಗಳಲ್ಲಿ ಇದನ್ನು ಖಂಡಿತವಾಗಿಯೂ ಸರಿಪಡಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾಗಿ ತಿಳಿಸಿದರು.
ಪಕ್ಷವು ಎಲ್ಲ ಸಮುದಾಯಗಳನ್ನು ಒಳಗೊಂಡು ಹೋಗಬೇಕಾದ ಅಗತ್ಯವಿದೆ. ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಭದ್ರ ಬುನಾದಿಯಾಗಿದ್ದು, ಅವರಿಗೆ ಸೂಕ್ತ ಪ್ರಾತಿನಿಧ್ಯ ಮತ್ತು ನ್ಯಾಯ ಸಿಗಬೇಕು ಎಂಬುದು ನಮ್ಮ ನಿಲುವಾಗಿದೆ ಎಂದರು.
ಶಾಸಕ ಎನ್.ಎ.ಹ್ಯಾರಿಸ್ ಮತ್ತು ಮೊಹಮ್ಮದ್ ನಲಪಾಡ್ ಮನೆ ಮೇಲೆ ಇಡಿ ದಾಳಿಯಾಗಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಇಂತಹ ಘಟನೆಗಳು
ಸಹಜವಾಗಿ ನಡೆಯುತ್ತಿರುತ್ತವೆ. ಆದರೆ, ಈ ನಿರ್ದಿಷ್ಟ ದಾಳಿಯ ಬಗ್ಗೆ ತಮಗೆ ತಿಳಿದಿಲ್ಲ. ದಾಳಿ ನಡೆದರೆ ಕಾನೂನು ಹೋರಾಟ ಮಾಡಬೇಕಷ್ಟೇ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಮಹಿಳಾ ಮೀಸಲಾತಿ ಬಿಲ್ ವಿಫಲವಾದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಾಡಿರುವ ಭಾಷಣದ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ನೀಡುವ ಪ್ರಾಮಾಣಿಕ ಉದ್ದೇಶ ಸರ್ಕಾರಕ್ಕೆ ಇದ್ದಿದ್ದರೆ, ಕ್ಷೇತ್ರ ಪುನರ್ವಿಂಗಡಣೆ ಮತ್ತು ಜನಗಣತಿ ಕಡ್ಡಾಯಗೊಳಿಸಿರುವುದನ್ನು ಕೈ ಬಿಡಬೇಕಿತ್ತು. ಯಾವುದೇ ಷರತ್ತುಗಳಿಲ್ಲದೆ ತಕ್ಷಣವೇ ಜಾರಿಗೆ ತರಬಹುದಿತ್ತು. ಆದರೆ, ಇವೆರಡನ್ನೂ ಲಿಂಕ್ ಮಾಡಿದ್ದೇ ಬಿಲ್ ಸೋಲಲು ಕಾರಣವಾಗಿದೆ. ಪ್ರಧಾನಿ ಮೋದಿ ಅವರು ಏನು ಭಾಷಣ ಮಾಡಿದರೂ ಈಗ ಜನರಿಗೆ ಅದರ ಹಿಂದಿನ ಸಂಚು ಅರ್ಥವಾಗುತ್ತಿದೆ. ಇದು ಕೇವಲ ಚುನಾವಣೆಗಾಗಿ ಮಾಡಿದ ಗಿಮಿಕ್ ಎಂಬ ನಿಜ ಸಂದೇಶ ಜನರಿಗೆ ತಲುಪಿದೆ ಎಂದು ಹೇಳಿದರು.















