'ಲಕ್ಷಗಟ್ಟಲೆ ಹಣ‌ ಪಡೆದು ದುರುಪಯೋಗ': ವಚನಾನಂದ ಶ್ರೀ ವಿರುದ್ಧ ಪೊಲೀಸರಿಗೆ ದೂರು

Coastal Bulletin
'ಲಕ್ಷಗಟ್ಟಲೆ ಹಣ‌ ಪಡೆದು ದುರುಪಯೋಗ': ವಚನಾನಂದ ಶ್ರೀ ವಿರುದ್ಧ ಪೊಲೀಸರಿಗೆ ದೂರು

ದಾವಣಗೆರೆ: ಪಂಚಮಸಾಲಿ ಗುರುಪೀಠದ ಒಳಜಗಳ ಮುಂದುವರಿದಿದೆ. ವಚನಾನಂದ ಸ್ವಾಮೀಜಿ ಹರಜಾತ್ರೆ ಸಂದರ್ಭದಲ್ಲಿ ಭಕ್ತರಿಂದ ಲಕ್ಷಾಂತರ ರೂಪಾಯಿ ಹಣ‌ ಪಡೆದು ದುರುಪಯೋಗ ಮಾಡಿದ್ದಾರೆ ಮತ್ತು ಶ್ವಾಸ ಕೇಂದ್ರದ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಿ ಪಂಚಮಸಾಲಿ ಮಠದ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಅವರು ದಾವಣಗೆರೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

2018ರ ಏಪ್ರಿಲ್‌ನಲ್ಲಿ ಪಂಚಮಸಾಲಿ ಗುರುಪೀಠಕ್ಕೆ ವಚನಾನಂದ ಸ್ವಾಮೀಜಿ ನೇಮಕವಾಗಿದ್ದಾರೆ. ಆ ವೇಳೆ ಬೆಂಗಳೂರಿನಲ್ಲಿರುವ ಶ್ವಾಸ ಪೀಠ ಬಿಡುವಂತೆ ಷರತ್ತು ವಿಧಿಸಲಾಗಿತ್ತು. ಆದ್ರೆ ಅವರು ಶ್ವಾಸ ಸಂಸ್ಥೆಯನ್ನು ಸಂಪೂರ್ಣವಾಗಿ ಬಿಟ್ಟಿಲ್ಲ. ಈ ಬಗ್ಗೆ ಸ್ವಾಮೀಜಿಗೆ ಹಲವು ಬಾರಿ ಟ್ರಸ್ಟ್ ಸೂಚಿಸಿತ್ತು. ಅಲ್ಲದೇ, 2026ರ ಹರಜಾತ್ರೆಯಲ್ಲಿ ಭಕ್ತರಿಂದ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿ ತಮ್ಮ ಸ್ವಂತ ಖಾತೆಗೆ ವರ್ಗಾಯಿಸಿಕೊಂಡಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಟ್ರಸ್ಟ್ ಪ್ರಧಾನ ಧರ್ಮದರ್ಶಿ ಒತ್ತಾಯಿಸಿದ್ದಾರೆ.

ದೂರಿನ ವಿವರ: ಬೆಂಗಳೂರಿನಲ್ಲಿ ವೈಯಕ್ತಿಕವಾಗಿ ಶ್ವಾಸ ಕೇಂದ್ರ ಎಂಬ ಸಂಸ್ಥೆಯನ್ನು ಸ್ವಾಮೀಜಿ ನಡೆಸುತ್ತಿದ್ದರು. ಮಠದ ಶ್ರೀಗಳಾಗಿ ಆಯ್ಕೆಯಾದ ನಂತರ ಅದರ ಸಂಪೂರ್ಣ ವ್ಯವಹಾರದಿಂದ ಮತ್ತು ಬಾಂಧವ್ಯದಿಂದ ಮುಕ್ತಿ ಹೊಂದುವಂತೆ ಷರತ್ತು ಹಾಕಲಾಗಿತ್ತು. ಆದರೆ ಶ್ರೀಗಳು ಶ್ವಾಸ ಕೇಂದ್ರದ ಸಂಪೂರ್ಣ ಸಂಪರ್ಕ ಬಿಡದೇ ತಮ್ಮ ಹೆಚ್ಚಿನ ಸಮಯವನ್ನು ಶ್ವಾಸ ಕೇಂದ್ರದಲ್ಲೇ ಕಳೆಯುತ್ತಿದ್ದಾರೆ. ಪಂಚಮಸಾಲಿ ಪೀಠದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ತೋರಿಸುತ್ತಿರಲಿಲ್ಲ. ಇದು ಭಕ್ತರ

ಮತ್ತು ಸಮಾಜದ ಎಲ್ಲಾ ಜನರ ಬೇಸರಕ್ಕೆ ಕಾರಣವಾಗಿತ್ತು.

2026ನೇ ಸಾಲಿನ ಹರಜಾತ್ರೆಯನ್ನು ಹರಿಹರದಲಿ ಆಯೋಜಿಸಿದಾಗ ಹರಜಾತ್ರೆ ಹೆಸರಿನಲ್ಲಿ ವಚನಾನಂದ ಸ್ವಾಮೀಜಿಯವರು ಭಕ್ತರಿಂದ ಮತ್ತು ಹಲವಾರು ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದು, ಇದನ್ನು ಟ್ರಸ್ಟ್ ಸದಸ್ಯರು ಮತ್ತು ಆಡಳಿತ ಮಂಡಳಿಯವರ ಗಮನಕ್ಕೆ ತಂದಿಲ್ಲ. ಭಕ್ತರಿಂದ ಹಣ ಪಡೆದ ಬಗ್ಗೆ ಯಾವುದೇ ರಸೀದಿಯನ್ನೂ ಕೊಡದೇ ತಮ್ಮ ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದು, ನಂತರ ಭಕ್ತರು ತಾವು ನೀಡಿದ ಹಣಕ್ಕೆ ರಸೀದಿ ಬೇಕೆಂದು ಶ್ರೀಗಳನ್ನು ಕೇಳಿದಾಗ ಸೂಕ್ತ ಉತ್ತರ ನೀಡದೇ ಅವರಿಗೆ ಅವಾಚ್ಯವಾಗಿ ಬೈದಿದ್ದಾರೆ.

ಬಳಿಕ ಭಕ್ತರಿಂದ ಪಡೆದ ಹಣವನ್ನು ಟ್ರಸ್ಟ್ಗೆ ಕೊಡದೇ ಬೆಂಬಲಿಗರ ಜೊತೆ ಮಠದ ಆವರಣದಲ್ಲಿ ಗೊಂದಲ ಸೃಷ್ಟಿಸಿ ಭಕ್ತರಲಿ ಆತಂಕ ಉಂಟುಮಾಡಿದ್ದಾರೆ. ಆದ್ದರಿಂದ ಸುದೀರ್ಘ ಚರ್ಚೆಯ ನಂತರ ವಚನಾನಂದ ಶ್ರೀಗಳನ್ನು ಜಗದ್ಗುರು ಸ್ಥಾನದಿಂದ ಪದಚ್ಯುತಿಗೊಳಿಸಿದ್ದೇವೆ. ಶ್ರೀಗಳು ಹರ ಜಾತ್ರೆ ಹೆಸರಿನಲ್ಲಿ ಭಕ್ತರಿಂದ ಪಡೆದ ಹಣವನ್ನು ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿಕೊಂಡು ಟ್ರಸ್ಟ್ ಮತ್ತು ಮಠಕ್ಕೆ ಮೋಸ, ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ದೂರಲಾಗಿದೆ.

Leave a Comment