ಬೆಂಗಳೂರು,: ಒಂದೇ ಕುಟುಂಬದ ಮೂವರು ಸಾವಿಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಜೆ.ಪಿ.ನಗರದ 3ನೇ ಹಂತದಲ್ಲಿ ನಡೆದಿದೆ. ಉಡುಪಿ ಮೂಲದ ತಾಯಿ ಸುಕನ್ಯಾ (48) ಮಕ್ಕಳಾದ ನಿಖಿತ್ (28) ಹಾಗೂ ನಿಶಿತ್ (28) ಸಾವಿಗೆ ಶರಣಾದವರು ಎಂದು ಗುರುತಿಸಲಾಗಿದೆ.
ಉಡುಪಿ ಮೂಲದ ಅಂಬಲಪಾಡಿ ನಿವಾಸಿಗಳಾಗಿರುವ ಕುಟುಂಬ ಬೆಂಗಳೂರಿನ ಜೆ.ಪಿ ನಗರದಲ್ಲಿ ವಾಸವಾಗಿದ್ದರು. ನಿನ್ನೆ (ಮಾರ್ಚ್ 19) ಮಂಗಳವಾರ ಸುಕನ್ಯಾ ಅವರ ಪತಿ ಇಲ್ಲದ ಸಮಯದಲ್ಲಿ ಬ್ಯಾಂಕ್ ಸಿಬ್ಬಂದಿ ಸಾಲ ವಾಪಾಸ್ ಕೇಳಿ ಮನೆ ಬಳಿಗೆ ಬಂದಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಸುಕನ್ಯಾ, ನಿಖಿತ್ ಹಾಗೂ ನಿಶಿತ್ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಂದು ಮೃತದೇಹಗಳು ಸುಟ್ಟಿರುವ ರೀತಿಯಲ್ಲಿ ಪತ್ತೆಯಾಗಿದ್ದು, ಮೂವರ ನಿಗೂಢ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಜೆ.ಪಿ.ನಗರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮೂವರ ಸಾವಿನ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತರ
ಸಂಬಂಧಿಕರು ಹಾಗೂ ಸ್ಥಳೀಯರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ.
ಉಡುಪಿಯಿಂದ ಬಂದಿದ್ದ ಜಯಾನಂದ್ ಅವರು ವುಡ್ ಡೈ ಮೇಕಿಂಗ್ ಫ್ಯಾಕ್ಟರಿ ಆರಂಭಿಸಿದ್ದರು. ಆದರೆ, ಫ್ಯಾಕ್ಟರಿ ನಷ್ಟವಾಗಿದ್ದರಿಂದ ಅದನ್ನು ಮುಚ್ಚಿದ್ದರು. ಫ್ಯಾಕ್ಟರಿಯಲ್ಲಿ ಇಟ್ಟಿದ್ದ ಕೆಮಿಕಲ್ ಬಾಟಲಿಗಳನ್ನು ಹಾಗೂ ಡೈ ಮೇಕಿಂಗ್ ಆಯಿಲ್‌ಗಳನ್ನು ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು. ನಿನ್ನೆ ಬ್ಯಾಂಕ್‌ನವರು ಸಾಲ ವಸೂಲಿಗೆ ಬಂದು ಕಿರುಕುಳ ನೀಡಿದ್ದರಿಂದ, ಗೌರವಕ್ಕೆ ಧಕ್ಕೆ ಉಂಟಾಗಿತ್ತು. ಇದರಿಂದ ಮನನೊಂದು ರಾತ್ರಿಯೆಲ್ಲಾ ಚಿಂತೆ ಮಾಡಿ ಬೆಳಗ್ಗಿನ ವೇಳೆ ತಾಯಿ ಸುಕನ್ಯಾ, ಮಕ್ಕಳಾದ ನಿಶ್ಚಿತ್ (ಅಂಗವಿಕಲ) ಹಾಗೂ ನಿಖಿತ್ ಬಾಗಿಲು ಹಾಕಿಕೊಂಡು ಮನೆಯಲ್ಲಿ ತಂದಿಟ್ಟಿದ್ದ ಫ್ಯಾಕ್ಟರಿಯ ಕೆಮಿಕಲ್ ಬಾಟಲಿಯನ್ನು ತೆರೆದು ಅದನ್ನು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.









