ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಒಂದೆಡೆ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದ್ದರೆ ಮತ್ತೊಂದೆಡೆ ವಿಜಯೇಂದ್ರ ಹಾಗೂ ಯತ್ನಾಳ್ ಬಣಗಳ ನಡುವೆ ಟಾಕ್ ವಾರ್ ಜೋರಾಗಿದೆ. ಇದರ ನಡುವೆ ಬಿಜೆಪಿ ನಾಯಕರೊಬ್ಬರು ದಿಢೀರ್ ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರದಲ್ಲಿ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅವರ ಹೆಸರು ಕೇಳಿಬಂದಿದೆ.
ಹೌದು ಮಾಜಿ ಸಚಿವರೂ ಆಗಿದ್ದ ವಿ.ಸುನಿಲ್ ಕುಮಾರ್ ಅವರು ರಾಜೀನಾಮೆ ಮುಂದಾಗಿದ್ದಾರೆ. ಸುನಿಲ್ ಕುಮಾರ್ ಅವರಿಗೆ ನೀಡಲಾಗಿದ್ದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಯಲು ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಖುದ್ದು ಅವರೇ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತನ್ನನ್ನು ಕೆಳಗಿಳಿಸುವಂತೆ ಹೈಕಮಾಂಡ್ಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಒಂದೆಡೆ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ಕೇಳಿಬರುತ್ತಿರುವ ನಡುವೆಯೇ ಸುನಿಲ್ ಕುಮಾರ್ ಅವರ ಈ ನಿರ್ಧಾರ ಕುತೂಹಲ ಮೂಡಿಸಿದೆ.
ಸುನಿಲ್ ಕುಮಾರ್ ಅವರ ಈ ನಿರ್ಧಾರಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಮೊದಲಿಗೆ ವಿಜಯೇಂದ್ರ ಅವರ ಬಣದಲ್ಲೇ ಸುನಿಲ್ ಕುಮಾರ್ ಗುರುತಿಸಿಕೊಂಡಿದ್ದರು. ಈ ಕಾರಣದಿಂದಲೇ ಅವರಿಗೆ ಪ್ರಧಾನ
ಕಾರ್ಯದರ್ಶಿ ಸ್ಥಾನ ಕೂಡ ಸಿಕ್ಕಿತ್ತು. ಆದರೆ, ಇತ್ತೀಚೆಗೆ ಅವರು ಪಕ್ಷದ ಬಣ ಬಡಿದಾಟದಿಂದ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇತ್ತೀಚೆಗೆ ಅವರು ವಿಜಯೇಂದ್ರ ಅವರಿಂದಲೂ ಅಂತರ ಕಾಯ್ದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸುನಿಲ್ ಕುಮಾರ್ ಅವರು ತಮ್ಮ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೆ ಇದಕ್ಕೂ ಮುನ್ನವೇ ಅವರು ಮೌಖಿಕವಾಗಿಯೂ ಒಮ್ಮೆ ಮನವಿ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಆದರೆ ಸುನಿಲ್ ಕುಮಾರ್ ಅವರ ಈ ನಿರ್ಧಾರಕ್ಕೆ ಪಕ್ಷದ ಬಣ ಬಡಿದಾಟ ಕಾರಣವಲ್ಲ, ಅವರು ತಮ್ಮ ವೈಯಕ್ತಿಕ ಕಾರಣದಿಂದ ಪ್ರ‍್ರಧಾನ ಕಾರ್ಯದರ್ಶಿ ಹುದ್ದೆ ತೊರೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.














