ಒಂದೇ ಮಳೆಗೆ ಬ್ರಾಂಡ್ ಬೆಂಗಳೂರು ನಿಜ ಬಣ್ಣ ಬಯಲು: ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಕಿಡಿ

Coastal Bulletin
ಒಂದೇ ಮಳೆಗೆ ಬ್ರಾಂಡ್ ಬೆಂಗಳೂರು ನಿಜ ಬಣ್ಣ ಬಯಲು: ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಕಿಡಿ

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಸಂಭವಿಸಿರುವ ಮಳೆ ಅನಾಹುತ ಪರಿಹಾರ ಕಾರ್ಯಕ್ಕೆ ತಕ್ಷಣ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.

ಭಾನುವಾರ ರಾತ್ರಿ ನಗರದಲ್ಲಿ 103 ರಿಂದ 130 ಮಿಲಿ ಮೀಟರ್ ವರೆಗೆ ಮಳೆ ಬಿದ್ದು ಇಡೀ ನಗರದಲ್ಲಿ ಅವಾಂತರ ಸೃಷ್ಟಿಯಾಗಿದ್ದು, ತ್ವರಿತಗತಿಯಲ್ಲಿ ಪರಿಹಾರ ಕಾರ್ಯ ಕೈಗೆತ್ತಿಕೊಂಡು ಸಂತ್ರಸ್ತರ ನೆರವಿಗೆ ಆಗಮಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಂಗಾರು ಪೂರ್ವದ ಒಂದೇ ಒಂದು ಮಳೆ ಕಾಂಗ್ರೆಸ್ ಸರ್ಕಾರದ "ಬ್ರಾಂಡ್ ಬೆಂಗಳೂರು"ನ ನಿಜ ಬಣ್ಣ ಬಯಲು ಮಾಡಿದೆ. ಇಂತಹ ಸನ್ನಿವೇಶದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿದ್ದ ಸಿಎಂ, ಡಿಸಿಎಂ ಮತ್ತು ಸಚಿವರು ಸಾಧನಾ ಸಮಾವೇಶದಲ್ಲಿ ಮೆರೆದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ಮಧ್ಯ ರಾತ್ರಿಯಿಂದಲೇ ನಗರದ ನಾನಾ ಪ್ರದೇಶಗಳಿಂದ ತಮಗೆ ದೂರವಾಣಿ ಕರೆಗಳ ಮಹಾಪೂರ ಹರಿದು ಬರುತ್ತಿದೆ. ಅನೇಕ ಬಡಾವಣೆಗಳು ಜಲಾವೃತವಾಗಿವೆ, ನೂರಾರು ವಾಹನಗಳು ಪ್ರವಾಹದಲ್ಲಿ ತೇಲಿ ಹೋಗಿವೆ, ಅನಾಥಾಶ್ರಮಕ್ಕೂ ನೀರು ನುಗ್ಗಿದೆ, ಇಡೀ ರಾತ್ರಿ ಜನರು ಜಾಗರಣೆ ಮಾಡುತ್ತಿದ್ದಾರೆ, ಅವರಿಗೆ ಊಟದ ವ್ಯವಸ್ಥೆ ಇಲ್ಲ, ಇಷ್ಟಾದರೂ ಬಿಬಿಎಂಪಿ ನೆರವಿಗೆ ಮುಂದಾಗಿಲ್ಲ ಎಂದು ಕಿಡಿಕಾರಿದರು.

ಹೊಣೆಗೇಡಿತನದ ಪರಮಾವಧಿ: ಕಳೆದ ಸಲ ಮುಳುಗಡೆಯಾಗಿದ್ದ ಸಾಯಿ ಬಡಾವಣೆ, ನಂದಗೋಕುಲ ಬಡಾವಣೆ ಸೇರಿದಂತೆ ಅನೇಕ ಬಡಾವಣೆಗಳಿಗೆ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಪಾಲಿಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಶಾಶ್ವತ ಪರಿಹಾರದ ಭರವಸೆ ನೀಡಿದ್ದರು. ಆದರೆ, ಅದು ಮಾತಿನಲ್ಲೇ ಉಳಿದು ಈ ಸಲ ಮತ್ತೆ ಆ ಬಡಾವಣೆಗಳು ನೀರಿನಲ್ಲಿ ಮುಳುಗಿವೆ. ಆದರೂ ನಿವಾಸಿಗಳ ಅಳಲು ಕೇಳಲು ಯಾರೂ ಮುಂದಾಗಿಲ್ಲ ಎಂದು ಟೀಕಿಸಿದ್ದಾರೆ.

ಮೂರು ವ್ಯಾಲಿಗಳಲ್ಲೂ ಪ್ರವಾಹ: ಹೆಬ್ಬಾಳ, ಕೋರಮಂಗಲ ಮತ್ತು ವೃಷಭಾವತಿ ವ್ಯಾಲಿಯಲ್ಲಿ ಪ್ರವಾಹ ಬಂದಿದೆ. ಇನ್ನೂ ಮೂರು - ನಾಲ್ಕು ದಿನ ಭಾರೀ ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಕ್ಷಣ ತುರ್ತು ಪರಿಹಾರ ಕಾರ್ಯ ಪಡೆ ರಚಿಸಿ, ಸಹಾಯವಾಣಿ ಆರಂಭಿಸಬೇಕು. ನೀರು ನುಗ್ಗಿರುವ ಮನೆಗಳಿಗೆ ತಲಾ ಕನಿಷ್ಠ ಒಂದು ಲಕ್ಷ ರೂ. ಪರಿಹಾರ ವಿತರಿಸಬೇಕು. ಆ ಮನೆಯವರಿಗೆ ಊಟ, ತಿಂಡಿ ವ್ಯವಸ್ಥೆ ಮಾಡಿ ಎರಡು ತಿಂಗಳಿಗೆ ಆಗುವಷ್ಟು ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಅಪಮಾನ: ಹಿಂದಿನ ವರ್ಷದ ಲೋಪಗಳಿಂದ ಪಾಠ ಕಲಿಯದ ಸರ್ಕಾರದ ಬೇಜವಾಬ್ದಾರಿತನದಿಂದ ನಗರದಲ್ಲಿ ಅನಾಹುತ ಸಂಭವಿಸಿದೆ. ಮುಂಚಿತವಾಗಿ ಮೋರಿ, ಚರಂಡಿ, ರಾಜ ಕಾಲುವೆಗಳಲ್ಲಿ ಹೂಳು ತೆಗೆಸುವ ಕೆಲಸ ಮಾಡಬೇಕಿತ್ತು. ನಗರದ

ಅನೇಕ ಕಡೆ ವೈಟ್ ಟಾಫಿಂಗ್ ಮತ್ತು ರಿಪೇರಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿನ ಅವಶೇಷಗಳನ್ನು ತೆರವು ಮಾಡದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಬಿಬಿಎಂಪಿ ಮುನ್ನೆಚ್ಚರಿಕೆ ವಹಿಸದಿರುವುದೇ ಅನಾಹುತಗಳಿಗೆ ಕಾರಣ ಎಂದು ಖುದ್ದು ಗೃಹ ಸಚಿವ ಪರಮೇಶ್ವರ ಅವರು ಹೇಳಿದ್ದಾರೆ. ಉಸ್ತುವಾರಿ ಸಚಿವ ಡಿಕೆಶಿ ಅವರ ವೈಫಲ್ಯಕ್ಕೆ ಇದಕ್ಕಿಂತ ಇನ್ಯಾವುದೇ ಸರ್ಟಿಫಿಕೇಟ್ ಬೇಕಾ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನ ಹೆಸರನ್ನು ಪ್ರವಾಹದಲ್ಲಿ ಅಳುಕಿಸಿದ ಸರ್ಕಾರ: ಬೆಂಗಳೂರನ್ಮು ನೀರಲ್ಲಿ ಮುಳುಗಿಸಿ ಮೊದಲಿದ್ದ ಬೆಂಗಳೂರಿನ ಹೆಸರನ್ನು ಪ್ರವಾಹದಲ್ಲಿ ಅಳುಕಿಸಿ ಹಾಕಿದ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರಿಂದ ಅತ್ಯಧಿಕ ತೆರಿಗೆ ಪಡೆಯುವ ಸರ್ಕಾರ ಕಳೆದ ಎರಡು ವರ್ಷದಿಂದ ಮಳೆ ಪರಿಹಾರಕ್ಕಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ನೀಡಿದ್ದ 2000 ಕೋಟಿ ಹಣ ಬಿಡುಗಡೆ ಮಾಡದೇ, ಸಿಲಿಕಾನ ಸಿಟಿ, ಶ್ರಿಮಂತ ಸಿಟಿ ಬೆಂಗಳೂರನ್ನು ಬಡ ಸಿಟಿ ಬೆಂಗಳೂರನ್ನಾಗಿ ಮಾಡಿದೆ. ಇದು ಅತ್ಯಂತ ಖಂಡನೀಯ. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು ಮಳೆ ಅವಾಂತರ ಸರ್ಕಾರದ ಸಾಧನೆಯ ಚಿತ್ರದ ಟ್ರೈಲರ್: ರಾಜ್ಯ ಸರ್ಕಾರ ಕಳೆದ 2 ವರ್ಷಗಳಲ್ಲಿ ಮಾಡಿ ಸಾಧನೆಯನ್ನು ರಾಜ್ಯದ ಜನತೆಗೆ ತೋರಿಸುವುದಕ್ಕೆ ಬಳ್ಳಾರಿಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶವನ್ನು ಹಮ್ಮಿಕೊಂಡಿದೆ. ಆದರೆ ಬೆಂಗಳೂರು ಮಹಾನಗರದಲ್ಲಿ ಸುರಿದ ಭಾರೀ ಮಳೆಗೆ ಈ ಕಾಂಗ್ರೆಸ್ ಸರ್ಕಾರದ ಸಾಧನೆಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕಾಂಗ್ರೆಸ್ ಸರ್ಕಾರದ ಸಾಧನೆ ಚಿತ್ರ ಬಾಕಿ ಇದೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ಅವರು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹವಾಮಾನ ಇಲಾಖೆಯು ಒಂದು ವಾರದ ಮುಂಚೆ ಮಳೆಯ ಮುನ್ಸೂಚನೆ ನೀಡಿದ್ದರೂ, ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದೆ, ಬೆಂಗಳೂರು ಮಹಾನಗರದಲ್ಲಿ ಆಗಿರುವ ಮಳೆಯ ಅವಾಂತರಕ್ಕೆ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ನೇರಕಾರಣ ಎಂದು ಅವರು ಆರೋಪಿಸಿದರು.

ಕಳೆದ 2 ವರ್ಷಗಳಲ್ಲಿ ಬೆಂಗಳೂರು ನಗರವನ್ನು ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿಕೊಂಡು ಬಂದು, ಹಿಂದಿನ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು ಮಸೂದೆಗೆ ಅನುಮೋದನೆ ಪಡೆದುಕೊಂಡ ನಂತರ ಬ್ರ್ಯಾಂಡ್ ಬೆಂಗಳೂರು ಹೋಗಿ ಗ್ರೇಟರ್ ಬೆಂಗಳೂರು ಆಗಿದೆ; ಗ್ರೇಟರ್ ಬೆಂಗಳೂರು ಹೋಗಿ ಮುಳುಗಡೆ ಬೆಂಗಳೂರು ಆಗಿದೆ. ಇದು ರಾಜ್ಯ ಸರ್ಕಾರದ ಸಾಧನೆ ಎಂದು ಟೀಕಿಸಿದರು.

Leave a Comment