ಬೆಂಗಳೂರು: ಉದ್ಯೋಗ ಕೊಡಿಸುವುದಾಗಿ ಹೇಳಿ ತಮ್ಮ ಆ್ಯಪ್ ಪ್ರಚಾರಕ್ಕೆ ಬಳಸಿಕೊಂಡು ಹಣ ನೀಡದೆ ಯುವ ಸಮೂಹಕ್ಕೆ ವಂಚಿಸಿದ ಸಂಬಂಧ ಇಂಡಿಯನ್ ಮಿನಿ ಫ್ರೀಡಂ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಿ.ಎಸ್.ಸುಧೀರ್ ಹಾಗೂ ಆತನ ಕೆಲಸಗಾರರನ್ನು ಬನಶಂಕರಿ ಠಾಣೆ ಪೊಲೀಸರು ಮಂಗಳವಾರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಉದ್ಯೋಗಾಂಕ್ಷಿಗಳಿಗೆ ಅರೆಕಾಲಿಕ ಕೆಲಸದ ಆಮಿಷವೊಡ್ಡಿದ್ದ ಫ್ರೀಡಂ ಕಂಪನಿ ಸಿಇಓ ಸುಧೀರ್, ತಮ್ಮ ಆ್ಯಪನ್ನು ಹೆಚ್ಚು ಡೌನ್‌ಲೋಡ್ ಮಾಡಿಸಿದರೆ ಹಾಗೂ ಚಂದಾರಾರನ್ನಾಗಿ ಮಾಡಿಸಿದರೆ, ಪ್ರತಿ ತಿಂಗಳು 15 ಸಾವಿರ ನೀಡುವುದಾಗಿ ಹೇಳಿದ್ದರು. ಈ ಮಾತು ನಂಬಿದ ಕೆಲ ಯುವಕ-ಯುವತಿಯರು, ಸುಲಭವಾಗಿ ಹಣ ಸಂಪಾದಿಸುವ ಆಸೆಯಿಂದ ತಮ್ಮ ಬಂಧುಗಳು ಹಾಗೂ ಸ್ನೇಹಿತರನ್ನು ಫ್ರೀಡಂ ಆ್ಯಪ್‌ಗೆ ಚಂದಾದಾರನ್ನಾಗಿ ಮಾಡಿಸಿದ್ದರು. ಆದರೆ ಪೂರ್ವನಿಗದಿತ ಒಡಂಬಡಿಕೆಯಂತೆ ಕೆಲಸಗಾರರಿಗೆ ಕಂಪನಿ ಹಣ ಕೊಡಲಿಲ್ಲ.
ಈ ಬಗ್ಗೆ ಕೇಳಿದ ಎಲ್ಲರನ್ನು ಕೆಲಸದಿಂದ ಸುಧೀರ್ ವಜಾಗೊಳಿಸಿದ್ದರು. ಕೊನೆಗೆ ವಂಚನೆ ಆರೋಪ ಹೊರಿಸಿ ಸುಧೀರ್ ಹಾಗೂ ಆತನ ಕಂಪನಿಯ 23 ಮಂದಿ ವಿರುದ್ಧ ಬನಶಂಕರಿ ಠಾಣೆಗೆ 21 ಮಂದಿ ಸಂತ್ರಸ್ತರು ದೂರು ನೀಡಿದ್ದರು.
ಅದರನ್ವಯ ಸುಧೀರ್ ಸೇರಿದಂತೆ 23 ಆರೋಪಿಗಳ ವಿರುದ್ಧ ವಂಚನೆ ಆರೋಪಡಿ ಬನಶಂಕರಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣ ದಾಖಲಾದ ಬೆನ್ನಲ್ಲೇ ಬಂಧನ ಭೀತಿಯಿಂದ ಸುಧೀರ್ ಅವರು, ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ ಬಳಿಕ ಪೊಲೀಸರ ವಿಚಾರಣೆಗೆ ಆರೋಪಿಗಳು ಹಾಜರಾಗಿದ್ದರು ಎಂದು ತಿಳಿದು ಬಂದಿದೆ.
ನೋಟಿಸ್ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾದ ಸುಧೀರ್ ಹಾಗೂ ಆತನ ಕಂಪನಿಯ ಇತರೆ ಉದ್ಯೋಗಿಗಳನ್ನು ಜಯನಗರ ಎಸಿಪಿ ಕೆ.ವಿ.ಶ್ರೀನಿವಾಸ್ ಹಾಗೂ ಬನಶಂಕರಿ ಠಾಣೆ ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ್ ಸುಧೀರ್ಘವಾಗಿ ಪ್ರಶ್ನಿಸಿ ಹೇಳಿಕೆ ದಾಖಲಿಸಿಕೊಂಡರು. ಬಳಿಕ ಮತ್ತೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ಸೂಚಿಸಿ ಪೊಲೀಸರು ಕಳುಹಿಸಿದ್ದಾರೆ.














