ಬೆಂಗಳೂರು: ರಾಜ್ಯದಲ್ಲಿ 10 ದಿನಗಳಿಂದ ದೈನಂದಿನ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ರಾಜ್ಯ ಸರಕಾರವು ಮುಂಜಾಗ್ರತಾ ಕ್ರಮಗಳಾಗಿ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಸಾರ್ವಜನಿಕ ಪ್ರದೇಶಗಳಾದ ಶಾಪಿಂಗ್ ಮಾಲ್‍ಗಳು, ರೆಸ್ಟೋರೆಂಟ್‍ಗಳು, ಪಬ್‍ಗಳು, ಕೆಫಟೇರಿಯಾ, ಹೊಟೇಲ್‍ಗಳು, ಶೈಕ್ಷಣಿಕ ಸಂಸ್ಥೆಗಳು, ಹಾಸ್ಟೆಲ್‍ಗಳು, ಕಚೇರಿಗಳು, ಕಾರ್ಖಾನೆ ಇತ್ಯಾದಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಈ ಕ್ರಮವನ್ನು ಜಾರಿಗೊಳಿಸಲು ಮಾರ್ಷಲ್ ಹಾಗೂ ಪೊಲೀಸ್ ಸಿಬ್ಬಂದಿಗಳು ನಿಗಾ ವಹಿಸಲಿದ್ದಾರೆ.
ಸ್ವಂತ ವಾಹನಗಳು ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ
ಓಡಾಡುವ ಸಂದರ್ಭದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಫಲಿತಾಂಶ ಲಭ್ಯವಾಗುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿರಲು ಆದೇಶದಲ್ಲಿ ಸೂಚಿಸಲಾಗಿದೆ.
ಅರ್ಹರು ಮುನ್ನೆಚ್ಚರಿಕಾ ಲಸಿಕೆ(ಪ್ರಿಕಾಷನರಿ ಡೋಸ್) ಸೇರಿದಂತೆ ಕೋವಿಡ್ 19 ಲಸಿಕೆಯನ್ನು ಪಡೆಯಬೇಕಾಗಿದೆ. ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
















