Coastal Bulletin

ಮಂಡ್ಯ: ಮೇಲುಕೋಟೆ ಯದುಗಿರಿಯ ಯತಿರಾಜ ಮಠದ ಪೀಠಾಧಿಪತಿ ಯದುಗಿರಿ ಯತಿರಾಜ ಶ್ರೀಮನ್ ನಾರಾಯಣ ರಾಮಾನುಜ ಜಿಯರ್ ಅವರಿಗೆ ನಿಷೇದಿತ ಪಿಎಫ್ಐ ಸಂಘಟನೆಯಿಂದ ಬೆದರಿಕೆ ಬಂದಿದ್ದು ಭಾರತ ಸರ್ಕಾರ ವೈ ಮಾದರಿ ಭದ್ರತೆ ನೀಡುವಂತೆ ಆದೇಶಿಸಿದೆ. ಯತಿರಾಜ ಜಿಯರ್ ಅವರಿಗೆ ಇತ್ತೀಚೆಗೆ ಪಿಎಫ್ಐ ಸಂಘಟನೆ ವಿಡಿಯೋ ಸಂದೇಶದ ಮೂಲಕ ಜೀವ ಬೆದರಿಕೆ ಹಾಕಿರುವ ಸುದ್ದಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ವೈ ಮಾದರಿ ಭದ್ರತೆಯನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.

ಯದುಗಿರಿ ಯತಿರಾಜ ಮಠದ ಯತಿರಾಜ ಜಿಯರ್ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶಾಖ ಮಠದಲ್ಲಿ ವಾಸವಾಗಿದ್ದು ಮೇಲುಕೋಟೆ ವೈರಮುಡಿ, ಶ್ರೀ ರಾಮಾನುಜ ತಿರುನಕ್ಷತ್ರ ಸೇರಿದಂತೆ ವಿಶೇಷ ದಿನಗಳನ್ನು ಮಾತ್ರ ಮೇಲುಕೋಟೆಗೆ ಆಗಮಿಸಿ ಪೂಜಾ ಕೈಮ್ಕರ್ಯಗಳಲ್ಲಿ ತೊಡಗುತ್ತಿದ್ದರು. ಕಾಶ್ಮೀರದಲ್ಲಿ ಶ್ರೀ ಶಂಕರಾಚಾರ್ಯರು ಮತ್ತು ಶ್ರೀ ರಾಮಾನುಜಾಚಾರ್ಯರು ಸಂಚಾರ ಮಾಡಿದ್ದರಿಂದ ಶೃಂಗೇರಿ ಮಠದ ವತಿಯಿಂದ ಅಲ್ಲಿ ಶಂಕರಾಚಾರ್ಯರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿದ್ದರೆ, ಯತಿರಾಜ ಜಿಯರ್ ಅವರು ಭಾರತ ಸರ್ಕಾರದ ಅನುಮತಿ

ಮೇರೆಗೆ ಅಲ್ಲಿಗೆ ತೆರಳಿ ಶ್ರೀ ರಾಮಾನುಜಾಚಾರ್ಯರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದರು.


ಆ ಸಂದರ್ಭದಲ್ಲಿ ಕಾಶ್ಮೀರ ಸರಸ್ವತಿಯ ನೆಲೆವೀಡು. ಭಾರತದ ಅವಿಭಾಜ್ಯ ಅಂಗ ಎಂದು ಯತಿರಾಜ ಜಿಯರ್ ಹೇಳಿದ್ದರು. ಈ ಮಾತಿನಿಂದ ಕೆರಳಿದ ಪಿಎಫ್ಐ ಸಂಘಟನೆ ಅವರಿಗೆ ವಿಡಿಯೋ ಸಂದೇಶದ ಮೂಲಕ ಬೆದರಿಕೆ ಕರೆ ಹಾಕಿದೆ ಎಂದು ಹೇಳಲಾಗಿದೆ. ಈ ಕಾರಣದಿಂದ ಯತಿರಾಜ ಜಿಯರ್ ಅವರಿಗೆ ವೈ ಮಾದರಿ ಭದ್ರತೆಯನ್ನು ನೀಡುವಂತೆ ಭಾರತ ಸರ್ಕಾರ ಸೂಚಿಸಿದೆ.

Leave a Comment