ಬ್ರಾಹ್ಮಣರು ಮುಖ್ಯಮಂತ್ರಿ ಆಗೋದಾದರೆ ಆಗಲಿ. ಬ್ರಾಹ್ಮಣರು ಮುಖ್ಯಮಂತ್ರಿಯಾಗಬಾರದೆಂದು ಎಲ್ಲಿದೆ? ಅವರು ಭಾರತದ ಪ್ರಜೆಗಳಲ್ಲವೇ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬ್ರಾಹ್ಮಣರ ಬಗ್ಗೆ ಆಡಿರುವ ಮಾತುಗಳಿಗೆ ಸಂಬಂಧಿಸಿ ಸೋಮವಾರ ಸುದ್ದಿಗಾರರ ಜತೆಗೆ ಪ್ರತಿಕ್ರಿಯಿಸಿದ ಅವರು, ಬ್ರಾಹ್ಮಣರ ವಿರುದ್ಧದ ಹೇಳಿಕೆಗಳು ಹೊಸದೇನಲ್ಲ. ಹಿಂದಿನಿಂದಲೂ ಬ್ರಾಹ್ಮಣರ ವಿರುದ್ಧ ಮಾತುಗಳು ಕೇಳಿಬರುತ್ತಲೇ ಇವೆ. ಚುನಾವಣೆ ಬಂದಾಗ ಇದು ಹೆಚ್ಚಾಗುತ್ತೆ ಅಷ್ಟೇ ಎಂದರು.
ಬ್ರಾಹ್ಮಣರಾರಯರೂ ಧ್ವನಿ ಎತ್ತಿ ಮಾತನಾಡುವುದಿಲ್ಲ, ಸಂಖ್ಯಾ ಬಲ ಇಲ್ಲ. ಬ್ರಾಹ್ಮಣರು ಅಲ್ಪಸಂಖ್ಯಾತರು. ಆದ ಕಾರಣ ಏನು ಮಾತನಾಡಿದರೂ ನಡೆಯತ್ತದೆ ಎಂದು ಮಾತನಾಡ್ತಾರೆ. ರಾಜ್ಯದಲ್ಲಿ ಬ್ರಾಹ್ಮಣ ಶಾಸಕರು ಎಷ್ಟು ಜನ ಇದ್ದಾರೆ? ಎಷ್ಟುಮಂದಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಬ್ರಾಹ್ಮಣರ ವಿರುದ್ಧ ಮಾತನಾಡುವವರು ಏನು ಬೇಕಾದರೂ ಮಾತನಾಡುತ್ತಾರೆ. ಅದಕ್ಕೊಂದು ಹಿನ್ನೆಲೆ ಅಥವಾ ಪುರಾವೆ ಇಟ್ಟುಕೊಂಡು ಮಾತನಾಡಬೇಕು. ಯಾರೋ ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮಾಜವನ್ನು ದೂಷಿಸುವುದಾದರೆ ಇತರೆ ಸಮಾಜದಲ್ಲಿ ನಡೆದ ವಿಚಾರವನ್ನು ಆ ರೀತಿ ಏಕೆ ನೋಡುವುದಿಲ್ಲ ಎಂದು
ಪ್ರಶ್ನಿಸಿದರು.
‘ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಸೇರಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಮುಂಬರುವ ಚುನಾವಣೆ ಬಳಿಕ ಈ ರಾಜ್ಯದ ಮುಖ್ಯಮಂತ್ರಿ ಮಾಡುವ ಹುನ್ನಾರ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ನಡೆದಿದೆ. ಹೀಗಾಗಿ, ವೀರಶೈವ ಲಿಂಗಾಯತ, ಒಕ್ಕಲಿಗ, ಹಿಂದುಳಿದ ಮತ್ತು ದಲಿತ ವರ್ಗದವರು ಈ ಕುತಂತ್ರಕ್ಕೆ ಮರುಳಾಗಬಾರದು’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.ಕುಮಾರಸ್ವಾಮಿ ಬ್ರಾಹ್ಮಣ ಸಮುದಾಯದ ಕ್ಷಮೆಯಾಚಿಸಬೇಕೆಂದು ಬಿಜೆಪಿಯ ಹಲವು ನಾಯಕರು ಪಟ್ಟು ಹಿಡಿದಿದ್ದಾರೆ.














