ಬೆಂಗಳೂರು: ರಾಜ್ಯಕ್ಕೆ ಹೊಸ ರಾಜ್ಯಪಾಲರ ನೇಮಕವಾಗಿದೆ. ಸುಮಾರು ಏಳು ವರ್ಷಗಳಿಂದ ಕರ್ನಾಟಕದ ರಾಜ್ಯಪಾಲರಾಗಿದ್ದ ವಜೂಭಾಯಿ ವಾಲಾ ಅವರ ಸ್ಥಾನಕ್ಕೆ ಥಾವರ್ ಚಂದ್ ಗೆಹ್ಲೋಟ್ ಅವರನ್ನು ನೇಮಕ ಮಾಡಲಾಗಿದೆ.
ಪ್ರಸ್ತುತ ಕೇಂದ್ರ ಸರಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿರುವ ಗೆಹ್ಲೋಟ್ ಅವರು ರಾಜ್ಯಸಭೆಯಲ್ಲಿನ ಬಿಜೆಪಿ ನಾಯಕರಾಗಿದ್ದಾರೆ. ಜತೆಗೆ ಸಂಸದೀಯ ಸಮಿತಿ ಹಾಗೂ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಗಳಲ್ಲಿ ಸದಸ್ಯರಾಗಿದ್ದಾರೆ.
ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ. ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆ ಹಾಗೂ ಕೇಂದ್ರ ಸಂಪುಟ ಪುನಾರಚನೆಗೆ ನಿರ್ಧಾರ ಮಾಡಿರುವ ಪ್ರಧಾನಿ ಮೋದಿ ಹಿರಿಯ ಸಚಿವರಿಗೆ ಕೊಕ್ ನೀಡಿ ವಿವಿಧ ರಾಜ್ಯಗಳಿಗೆ ರಾಜ್ಯಪಾಲರನ್ನಾಗಿ ನೇಮಕ ಮಾಡುವ ಮೂಲಕ,
ಸಂಪುಟದಲ್ಲಿ ಹೊಸ ಮುಖಗಳಿಗೆ ಸ್ಥಾನ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹಿಮಾಚಲ ಪ್ರದೇಶದ ಉಸ್ತುವಾರಿ ವಹಿಸಿದ್ದ ದತ್ತಾತ್ರೇಯ ಈಗ ಹರಿಯಾಣದಲ್ಲಿ ಸ್ಥಾನ ವಹಿಸಿಕೊಳ್ಳಲಿದ್ದು, ಹರಿ ಬಾಬು ಕಂಬಂಪತಿ ಅವರನ್ನು ಮಿಜೋರಾಂ ನ ರಾಜ್ಯಪಾಲರಾಗಿ, ಮಂಗುಭಾಯಿ ಚಗನ್ ಭಾಯ್ ಪಟೇಲ್ ಮಧ್ಯಪ್ರದೇಶ, ರಾಜೇಂದ್ರನ್ ವಿಶ್ವನಾಥ ಅರ್ಲೇಕರ್ ಹಿಮಾಚಲ ಪ್ರದೇಶ, ಪಿಎಸ್ ಶ್ರೀಧರನ್ ಪಿಳ್ಳೆ ಗೋವಾ, ಸತ್ಯದೇವ್ ನಾರಾಯಣ ಆರ್ಯ ತ್ರಿಪುರಾ ಮತ್ತು ರಮೇಶ್ ಬೈಸ್ ಜಾರ್ಖಂಡ್ ಅವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ















