ಕಲಬುರಗಿ: ಬೀದರ್ನಲ್ಲಿ ಇತ್ತೀಚೆಗೆ ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗೆ ಜನಿವಾರ ತೆಗೆಸಿದ್ದ ಪ್ರಕರಣ ಮಾಸುವ ಮುನ್ನವೇ ಕಲಬುರಗಿಯಲ್ಲಿ ಅದೇ ರೀತಿಯ ಆರೋಪ ಕೇಳಿಬಂದಿದೆ. ಭಾನುವಾರ ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆಯುವಂತೆ ಹೇಳಲಾಗಿದೆ ಎಂದು ಆರೋಪಿಸಲಾಗಿದೆ.
ಬೇಕೇ ಬೇಕು.. ನ್ಯಾಯ ಬೇಕು ಅಂತ ಘೋಷಣೆ ಕೂಗುತ್ತ ನಿಂತಿರೋ ಹಿಂದೂ ಕಾರ್ಯಕರ್ತರು.. ಮತ್ತೊಂದೆಡೆ, ಜನಿವಾರವನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ವಿದ್ಯಾರ್ಥಿಯ ತಂದೆ.. ಈ ದೃಶ್ಯ ಕಂಡು ಬಂದಿದ್ದು ಕಲಬುರಗಿಯ ಸೈಂಟ್ ಮೇರಿ ಶಾಲೆಯ ಮುಂಭಾಗದಲ್ಲಿ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶ್ರೀಪಾದ ಪಾಟೀಲ್ ಎಂಬ ವಿದ್ಯಾರ್ಥಿಗೆ ನೀಟ್ ಪರೀಕ್ಷೆಯಲ್ಲಿ ಜನಿವಾರ ವಿಚಾರವಾಗಿ ಸಮಸ್ಯೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿದ್ಯಾರ್ಥಿ ನೀಟ್ ಪರೀಕ್ಷೆ ಬರೆಯಲು ಕಲಬುರಗಿಗೆ ಬಂದಿದ್ದ. ಮಧ್ಯಾಹ್ನ 1 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ ಆಗುವ ಸಂದರ್ಭದಲ್ಲಿ ಜನಿವಾರ ತೆಗೆದು ಬನ್ನಿ ಅಂತ ಪರೀಕ್ಷಾ ಸಿಬ್ಬಂದಿ ಹೇಳಿದ್ದಾರೆ. ಜನಿವಾರ ತೆಗೆದು ಬರದಿದ್ರೆ ಪರೀಕ್ಷೆ ಬರೆಯಲು ಅವಕಾಶ ನೀಡಲ್ಲ ಅಂತ ಹೇಳಿದ್ದಕ್ಕೆ ನನ್ನ ಮಗ ಪರೀಕ್ಷೆ ಬರಿಯಲ್ಲ ಅಂತ ಹೇಳಿದ್ದ. ಆದ್ರೆ ಪರೀಕ್ಷೆ ಬರೆಯಲ್ಲ ಅಂದ್ರೆ ಸರಿಯಲ್ಲ, ಒಂದು ವರ್ಷದಿಂದ ನೀನು ಪರೀಕ್ಷೆಗೆ ತಯಾರಿ ಮಾಡಿದಿಯಾ. ಮೊದ್ಲು ಹೋಗಿ ಪರೀಕ್ಷೆ ಬರಿ
ಅಂತ ಮಗನಿಗೆ ಸಮಜಾಯಿಸಿ ಹೇಳಿ ಪರೀಕ್ಷೆ ಬರೆಯಲು ಕಳುಹಿಸಿದ್ದೆ ಅಂತಾ ನೊಂದ ವಿದ್ಯಾರ್ಥಿಯ ಶ್ರೀಪಾದ್ ಅವರ ತಂದೆ ಸುಧೀರ್ ಪಾಟೀಲ್ ಹೇಳಿದರು.
ನಮ್ಮ ಸಮುದಾಯದ ಮೇಲೆ ಪದೇ ಪದೇ ಅವಮಾನ ಮಾಡ್ತಾ ಇದ್ದಾರೆ ಅಂತ ಹಿಂದೂ ಪರ ಸಂಘಟನೆ ಮತ್ತು ಬ್ರಾಹ್ಮಣ ಸಮಾಜದ ಮುಖಂಡರು ಮತ್ತು ಸಮಾಜದವರು ಜನಿವಾರ ತೆಗೆಸಿದ್ದನ್ನು ಖಂಡಿಸಿ ಶಾಲೆ ಮುಂದೆ ಎಬಿವಿಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಯಾರು ಜನಿವಾರ ತೆಗೆಸಿದ್ದಾರೋ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಪ್ರತಿಭಟನಾಕಾರರು ಆಗ್ರಹಿಸಿದರು.
ಯಾರದ್ದೇ ಧರ್ಮದ ಭಾವನೆಗೆ ದಕ್ಕೆ ತರಬಾರದು ಅಂತ ಸರ್ಕಾರ ಆದೇಶ ಮಾಡಿದ್ರು ಸಹ ನೀಟ್ ಪರೀಕ್ಷೆ ಸಂದರ್ಭ ಮತ್ತೆ ಜನಿವಾರ ತೆಗೆಸಿ ನಮ್ಮ ಭಾವನೆಗೆ ದಕ್ಕೆ ತಂದಿದ್ದಾರೆ. ಜನಿವಾರ ತೆಗೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಕೆಲವರು ಹೀಗೆ ಮಾಡ್ತಾರೆ. ಇದರ ಬಗ್ಗೆ ಸರ್ಕಾರದ ಗಮನಕ್ಕೆ ತರ್ತೇವೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದ್ರು.














