ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದರೆ ಸುಮ್ಮನಿರಲ್ಲ – ವಿಜಯೇಂದ್ರ ಆಕ್ರೋಶ

Coastal Bulletin
ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದರೆ ಸುಮ್ಮನಿರಲ್ಲ – ವಿಜಯೇಂದ್ರ ಆಕ್ರೋಶ

ಕೊಪ್ಪಳ: ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ, ಬಂಧಿಸಲಾಗುತ್ತಿದೆ. ಇದರಿಂದ ಮುಂದೆ ಆಗುವ ಎಲ್ಲಾ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಆರೋಪಿಸಿದರು.

ಕೊಪ್ಪಳದ (Koppal) ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಪೊಲೀಸರ ಮೇಲೆ ಒತ್ತಡ ಹಾಕಿ, ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದೆ. ಮಧ್ಯರಾತ್ರಿ ಬಿಜೆಪಿ (BJP) ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಮುಖಂಡರ ಮನೆ-ಮನೆಗೆ ಹೋಗಿ ಬಾಗಿಲು ತಟ್ಟುತ್ತಿದ್ದಾರೆ. ಕೆಲವರನ್ನು ಓಲೈಕೆ ಮಾಡಲು ರಾಜ್ಯ ಸರ್ಕಾರ ಹೀಗೆ ಮಾಡುತ್ತಿದೆ. ತಪ್ಪಿತಸ್ಥರನ್ನು ಬಂಧಿಸಲು ನಮ್ಮ ಅಭ್ಯಂತರ ಇಲ್ಲ. ಆದರೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಟಾರ್ಗೆಟ್ ಮಾಡಿದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಕಿಡಿಕಾರಿದರು.

ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕೆಟ್ಟು ಹೋಗಿದೆ. ಮೇಲಿಂದ ಮೇಲೆ ಕೊಲೆ ಪ್ರಕರಣಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸದ್ಯದ ರಾಜ್ಯ ಸರ್ಕಾರದ ನಡವಳಿಕೆಯಿಂದ ಮತ್ತಷ್ಟು ಸಮಸ್ಯೆ ಹೆಚ್ಚಾಗಲಿದೆ ಎಂದು ದೂರಿದರು.

`ಆಪರೇಷನ್ ಸಿಂಧೂರ’ದಿಂದ (Operation Sindoor) ದೇಶಕ್ಕೆ ಆಗಿರುವ

ನಷ್ಟದ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು ಎಂಬ ಸಚಿವ ಪ್ರಿಯಾಂಕಾ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಿಯಾಂಕಾ ಖರ್ಗೆ ತಮ್ಮ ಖಾತೆಯ ಜವಾಬ್ದಾರಿ ನೋಡಿಕೊಳ್ಳಲಿ. `ಆಪರೇಷನ್ ಸಿಂಧೂರ’ದ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆ ಇದೆ. ಲೆಕ್ಕ ಕೇಳಲು ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ತಿರಂಗಾ ಯಾತ್ರೆಯಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿ ಫೋಟೊ ಬಳಕೆ ಮಾಡಿಕೊಂಡಿಲ್ಲ. ಇದು ನಮ್ಮ ಬದ್ಧತೆ ಎಂದು ತಿರುಗೇಟು ನೀಡಿದರು.

ಕಮಲ್ ಹಾಸನ್‌ಗೆ ತಮಿಳಿನ ಬಗ್ಗೆ ಅಭಿಮಾನ ಇರಲಿ. ಆದರೆ, ತಪ್ಪು ಮಾಹಿತಿಯಿಂದ ಕನ್ನಡ ಭಾಷೆ ಬಗ್ಗೆ ಮಾತನಾಡುವುದು ಸರಿಯಲ್ಲ. ಇನ್ನೂ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಒಂದು ಕೈಯಿಂದ ಕೊಡುವುದು, ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಅನುಷ್ಠಾನ ಸಮಿತಿ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕುವ ಕೆಲಸ ಮಾಡುತ್ತಿದ್ದಾರೆ. ಬೆಲೆ ಏರಿಕೆಯಿಂದ ಜನರು ಪರದಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Leave a Comment