ಬೆಂಗಳೂರಲ್ಲಿ ಉಚಿತ ಆಟೋ ಪ್ರಯಾಣ, ನೇಪಾಳದಲ್ಲಿ ಸ್ಕ್ರೀನಿಂಗ್, ದೆಹಲಿಯಲ್ಲಿ ಆಹಾರ ವಿತರಣೆ: ಫೈನಲ್​ಗೆ RCB ಫ್ಯಾನ್ಸ್​ ಸಿದ್ಧತೆ

Coastal Bulletin
ಬೆಂಗಳೂರಲ್ಲಿ ಉಚಿತ ಆಟೋ ಪ್ರಯಾಣ, ನೇಪಾಳದಲ್ಲಿ ಸ್ಕ್ರೀನಿಂಗ್, ದೆಹಲಿಯಲ್ಲಿ ಆಹಾರ ವಿತರಣೆ: ಫೈನಲ್​ಗೆ RCB ಫ್ಯಾನ್ಸ್​ ಸಿದ್ಧತೆ

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ಗೆ ಮಂಗಳವಾರ (ಜೂನ್ 3ರಂದು) ತೆರೆಬೀಳಲಿದೆ.‌ ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆಯಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ಎದುರಾಳಿಯಾಗಲಿದೆ. ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್‌ ಗೆ ಸೋಲುಣಿಸಿ ಫೈನಲ್‌ಗೇರಿದ್ದ ಆರ್‌ಸಿಬಿ ತಂಡ ಮತ್ತೊಮ್ಮೆ ಕಿಂಗ್ಸ್ ಸವಾಲು ಎದುರಿಸಿ ಚೊಚ್ಚಲ ಚಾಂಪಿಯನ್​ಶಿಪ್​ ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿದೆ.

ಇತ್ತ 9 ವರ್ಷಗಳ ಬಳಿಕ ನೆಚ್ಚಿನ ತಂಡ ಫೈನಲ್ ತಲುಪಿರುವ ಸಂಭ್ರಮದಲ್ಲಿರುವ ಆರ್‌ಸಿಬಿ ಅಭಿಮಾನಿಗಳು, 'ಈ ವರ್ಷ ನಮ್ದೇ, ಈ ಸಲ ಕಪ್ ಕೂಡಾ ನಮ್ದೇ' ಎನ್ನುತ್ತಿದ್ದಾರೆ. ಅಲ್ಲದೇ, ಫೈನಲ್ ಪಂದ್ಯಕ್ಕೆ ತಮ್ಮದೇ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಆರ್‌ಸಿಬಿ ಜರ್ಸಿ ಧರಿಸಿದ ಪ್ರಯಾಣಿಕರಿಗೆ ಉಚಿತ ರೈಡ್: ಫೈನಲ್ ಪಂದ್ಯದಂದು ಆರ್‌ಸಿಬಿ ಜರ್ಸಿ ಧರಿಸಿದ ಪ್ರಯಾಣಿಕರಿಗೆ ಉಚಿತ ಸೇವೆ ನೀಡುವ ಮೂಲಕ ಬೆಂಗಳೂರಿನ ಆಟೋ ಚಾಲಕ ಪರಶುರಾಮ್ ಶೆಟ್ಟಿ ಎಂಬವರು ವಿಶಿಷ್ಟವಾಗಿ ತಮ್ಮ ಅಭಿಮಾನ ಪ್ರದರ್ಶಿಸುತ್ತಿದ್ದಾರೆ. ಸ್ನೇಹಿತ ಅಜ್ಮಲ್ ಹುಸೇನ್ ಜೊತೆಗೂಡಿ ಈ ರೀತಿ ವಿನೂತನವಾಗಿ ತಮ್ಮ ಅಭಿಮಾನವನ್ನು ಪರಶುರಾಮ್ ಶೆಟ್ಟಿ ಅವರು ವ್ಯಕ್ತಪಡಿಸುತ್ತಿದ್ದಾರೆ.

ಈ ಇಬ್ಬರು ಚಾಲಕರ ಜೋಡಿ ಈ ಐಪಿಎಲ್ ಆವೃತ್ತಿಯಲ್ಲೇ ಆರ್‌ಸಿಬಿ ಜರ್ಸಿ ಧರಿಸಿದ ಹಲವು ಪ್ರಯಾಣಿಕರಿಗೆ ಉಚಿತ ಸವಾರಿ ಸೇವೆ ಒದಗಿಸಲಿದೆ. ಆರ್‌ಸಿಬಿ ಮೇಲಿನ ಅಭಿಮಾನದ ಕುರಿತು ಪ್ರತಿಕ್ರಿಯಿಸಿದ ಪರಶುರಾಮ್ ಶೆಟ್ಟಿ, "ಈ ವರ್ಷ ಖಂಡಿತವಾಗಿಯೂ ನಮ್ಮದೇ, ನಾವು ತುಂಬಾ ಉತ್ಸುಕರಾಗಿದ್ದೇವೆ. ನನಗೆ ಮೂವರು ಮಕ್ಕಳಿದ್ದಾರೆ. ಪಂದ್ಯದ ದಿನಗಳಲ್ಲಿ ಮನೆಯಲ್ಲಿ ಅದೊಂದು ದೊಡ್ಡ ವಿಷಯ. ಆದರೂ ನನಗೆ ನೆನಪಿರುವಷ್ಟು ಕಾಲವೂ ನಾನು ಆರ್‌ಸಿಬಿಯ ಅಭಿಮಾನಿಯಾಗಿರುತ್ತೇನೆ" ಎಂದು ಹೆಮ್ಮೆಯಿಂದ ಹೇಳಿಕೊಂಡರು.

ನೇಪಾಳದಲ್ಲಿ ಆರ್‌ಸಿಬಿ ಕಲರವ: ಐಪಿಎಲ್ ಪಂದ್ಯವನ್ನು ಬಿಗ್ ಸ್ಕ್ರೀನ್‌ಗಳ ಮೂಲಕ ಪ್ರದರ್ಶಿಸಲು ನೇಪಾಳದ ಆರ್‌ಸಿಬಿ ಫ್ಯಾನ್ಸ್ ಕ್ಲಬ್ ಸಜ್ಜಾಗಿದೆ. 25ರ ಪ್ರಾಯದ ಸಮಗ್ರ ಅಧಿಕಾರಿ ಎಂಬ ಅಭಿಮಾನಿ ಆರ್‌ಸಿಬಿ ಫ್ಯಾನ್ಸ್‌ ಕ್ಲಬ್ ಸ್ಥಾಪಿಸಿದ್ದು, ಪ್ರತಿ ಆವೃತ್ತಿಯಲ್ಲಿಯೂ ಗಡಿಯಾಚೆಯಿಂದಲೂ ಆರ್‌ಸಿಬಿ ತಂಡಕ್ಕೆ ಬೆಂಬಲ

ಸೂಚಿಸುತ್ತಿದ್ದಾರೆ.

ಈ ಬಾರಿ ಆರ್‌ಸಿಬಿ ತಂಡ ಫೈನಲ್ ತಲುಪಿರುವುದರ ಕುರಿತು ಮಾತನಾಡಿರುವ ಸಮಗ್ರ ಅಧಿಕಾರಿ, "ನೇಪಾಳದಲ್ಲಿ ನಾವು ಪಂದ್ಯದ ಪ್ರದರ್ಶನಗಳನ್ನು ಆಯೋಜಿಸುತ್ತಿರುವುದರಿಂದ ನಾನು ಅಹಮದಾಬಾದ್‌‌ಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲವಾದರೂ, ನಮ್ಮ ಕೆಲವು ಸದಸ್ಯರು ಸ್ಟೇಡಿಯಂನಿಂದ ತಂಡವನ್ನು ಹುರಿದುಂಬಿಸಲಿದ್ದಾರೆ. ಆರ್‌ಸಿಬಿ ಫ್ಯಾನ್ಸ್ ಕ್ಲಬ್ ನೇಪಾಳ, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ನಾವು ನೇಪಾಳದಲ್ಲಿ ಇರಬಹುದು, ಆದರೆ ನಾವೂ ಸಹ ಸದಾ ತಂಡದ ಭಾಗವೆಂದು ಭಾವಿಸುತ್ತೇವೆ" ಎಂದಿದ್ದಾರೆ.

ಫೈನಲ್‌ನಲ್ಲಿ ಆರ್‌ಸಿಬಿ ಗೆದ್ದರೆ ಉಚಿತ ಆಹಾರ ವಿತರಣೆ: ಈ ಬಾರಿಯ ಐಪಿಎಲ್‌ ಫೈನಲ್‌ನಲ್ಲಿ ಆರ್‌ಸಿಬಿ ತಂಡ ಗೆಲುವು ಸಾಧಿಸಿದರೆ ಉಚಿತವಾಗಿ ಆಹಾರ ವಿತರಣೆ ಮಾಡುವುದಾಗಿ ದೆಹಲಿ ಮೂಲದ ಸೂಪರ್‌ ಫ್ಯಾನ್ ಅಭಿಮನ್ಯು ರಾವ್ ತಿಳಿಸಿದ್ದಾರೆ. ಈ ಬಾರಿಯ ಐಪಿಎಲ್‌ನ ಲೀಗ್ ಹಂತದಲ್ಲಿ ಸಿಎಸ್‌ಕೆ ತಂಡದ ವಿರುದ್ಧ ಆರ್‌ಸಿಬಿ ತಂಡ ಗೆಲುವು ಸಾಧಿಸಿದ ಬಳಿಕ ಅಭಿಮನ್ಯು ರಾವ್ ಅವರು 1,000 ಜನರಿಗೆ ಉಚಿತವಾಗಿ ಆಹಾರ ವಿತರಿಸಿದ್ದಾರೆ.

ಅಹಮದಾಬಾದ್‌‌ನಲ್ಲಿ ಆರ್‌ಸಿಬಿ ಫ್ಯಾನ್ಸ್ ಆರ್ಮಿ: ಫೈನಲ್ ಪಂದ್ಯಕ್ಕೆ ಮೈದಾನದಲ್ಲಿ ಆರ್‌ಸಿಬಿ ತಂಡಕ್ಕೆ ಚಿಯರ್ ಮಾಡಲು ಬೆಂಗಳೂರಿನ ಆರ್‌ಸಿಬಿ ಫ್ಯಾನ್ಸ್ ಆರ್ಮಿ ತಯಾರಾಗಿದೆ. 2009ರಲ್ಲಿ ಆರ್‌ಸಿಬಿ ಫ್ಯಾನ್ಸ್ ಆರ್ಮಿ ಸ್ಥಾಪಿಸಿದ ಅಲೆನ್ ಅಭಿಷೇಕ್ ಪ್ರತಿಕ್ರಿಯಿಸಿ, "ನಮ್ಮ ಧ್ವಜಗಳು ಮತ್ತು ಬ್ಯಾನರ್‌ಗಳನ್ನು ನಾವು ಸಿದ್ಧಪಡಿಸಿದ್ದೇವೆ. ನಾವು ಗೆದ್ದ ತಕ್ಷಣ ಬೆಂಗಳೂರಿನಲ್ಲಿ ಮೆರವಣಿಗೆಗೆ ಯೋಜಿಸುತ್ತಿದ್ದೇವೆ. ನಮ್ಮ ಆರ್ಮಿಯ ಹೆಚ್ಚಿನ ಸಂಖ್ಯೆಯ ಜನರು ತಂಡವನ್ನು ಹುರಿದುಂಬಿಸಲು ಅಹಮದಾಬಾದ್‌ನಲ್ಲಿರುತ್ತಾರೆ. ಆದರೆ ಬೆಂಗಳೂರಿನಲ್ಲಿಯೂ ಅಂದು ವಿಶೇಷ ದಿನವಾಗಿರುವುದರಿಂದ ನಾನು ಇಲ್ಲಿಯೇ ಇರಲು ಬಯಸಿದ್ದೇನೆ" ಎಂದು ತಿಳಿಸಿದ್ದಾರೆ.

Leave a Comment