ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಅಭಿಷೇಕ್ ಬಚ್ಚನ್ ಮಾಲೀಕತ್ವದ ಜೈಪುರ್ ಪಿಂಕ್ ಪ್ಯಾಂಥರ್ಸ್ ಭರ್ಜರಿ ಗೆಲುವಿನ ಮೂಲಕ 9ನೇ ಆವೃತ್ತಿ ಟ್ರೋಫಿ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಹೋರಾಟ ನಡೆಸಿದ ಜೈಪುರ್ ಪಿಂಕ್ ಪ್ಯಾಂಥರ್ಸ್ 33-29 ಅಂಕಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಜೈಪುರ ಪಿಂಕ್ ಪ್ಯಾಂಥರ್ಸ್ 2ನೇ ಪ್ರೋ ಕಬಡ್ಡಿಲೀಗ್ ಟ್ರೋಫಿ ವಶಪಡಿಸಿಕೊಂಡಿದೆ. ಇತ್ತ ಚೊಚ್ಚಲ ಟ್ರೋಫಿ ಗೆಲ್ಲುವ ಪುಣೇರಿ ಪಲ್ಟಾನ್ ಕನಸು ಛಿದ್ರಗೊಂಡಿದೆ. ಆದರೆ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಹೋರಾಟ ನೀಡಿದ ಪುಣೇರಿ ತಂಡಕ್ಕೆ ಮೆಚ್ಚುಗೆ ಸುರಿಮಳೆ ವ್ಯಕ್ತವಾಗುತ್ತಿದೆ.
ಫಸ್ಟ್ ಹಾಫ್‌ನಲ್ಲಿ ಜೈಪುರ ಹಾಗೂ ಪುಣೇರಿ ಸಮಬಲದ ಹೋರಾಟ ನೀಡುತ್ತಲೇ ಸಾಗಿತು. ರೈಡ್ಸ್ ಪಾಯಿಂಟ್ಸ್‌ನಲ್ಲಿ ಜೈಪುರ ಮುನ್ನಡೆ ಸಾಧಿಸಿದರೆ, ಟ್ಯಾಕಲ್‌ನಲ್ಲಿ ಪುಣೇರಿ ಬಿಗಿ ಹಿಡಿತ ಸಾಧಿಸಿತ್ತು. ಆದರೆ ಮೊದಲಾರ್ಧದ ಅಂತಿಮ ಹಂತದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 14-12 ಅಂಕಗಳ ಮುನ್ನಡೆ ಕಾಯ್ದುಕೊಂಡಿತು. ಈ ಮೂಲಕ 2 ಅಂಕಗಳ ಮುನ್ನಡೆಯೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.
ದ್ವಿತಿಯಾರ್ಧದಲ್ಲಿ ಪುಣೇರಿ
ತಿರುಗೇಟು ನೀಡಲ ಹಲವು ಪ್ರಯತ್ನಗಳನ್ನು ನಡೆಸಿತ್ತು. ಈ ವೇಳೆ ಹೆಚ್ಚು ಅಂಕಗಳನ್ನು ಗಳಿಸಿದರೂ ಜೈಪುರ ಹಿಂದಿಕ್ಕಲು ಸಾಧ್ಯವಾಗಲಿಲ್ಲ. ದ್ವಿತಿಯಾರ್ಧದಲ್ಲಿ ಜೈಪುರ 19 ಅಂಕ ಗಳಿಸಿದರೆ, ಪುಣೇರ್ 11 ಅಂಕಗಳಿಸಿತು. ಕೊನೆಯ ಹಂತದಲ್ಲಿ ಪುಣೇರಿ ಆಕ್ರಮಣ ಆಟದ ಮೂಲಕ ಹೆಚ್ಚು ಅಂಕಗಳಿಸುವ ಪ್ರಯತ್ನ ಮಾಡಿತು. ಆದರೆ ಸಮಯದ ಅಭಾವವೂ ಕಾಡಿತು. ಅಂತಿಮವಾಗಿ ಪುಣೇರಿ ಪಲ್ಟಾಣ್ ಶರಣಾಯಿತು.














