ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿ ಆಗಿವೆ. ಹಾರಾರೆ ಸ್ಫೋರ್ಟ್ಸ್ ಕ್ಲಬ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಸಿಡಿಲಬ್ಬರ ಬ್ಯಾಟಿಂಗ್ ಮೂಲಕ ಕೇವಲ 55 ಎಸೆತಗಳಲ್ಲಿ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ನಾಲ್ಕನೇ ಓವರ್‌ನಲ್ಲಿ ಆರನ್ ಜಾರ್ಜ್ (9) ಅವರ ವಿಕೆಟ್ ಬೀಳುತ್ತಿದ್ದಂತೆ ಮೊದಲ ಆಘಾತ ಅನುಭವಿಸಿತು. ನಂತರ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಭರ್ಜರಿ ಪ್ರದರ್ಶನ ನೀಡಿದರು. ಅದರಲ್ಲೂ ವೈಭವ್ ಇಂಗ್ಲಿಷ್ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿ ತಂಡದ ಸ್ಕೋರ್ ವೇಗವನ್ನು ಹೆಚ್ಚಿಸಿದರು. ಒಟ್ಟಾರೆ 79 ಎಸೆತಗಳಲ್ಲಿ 175 ರನ್ ಗಳಿಸಿ ಔಟಾಗಿದ್ದಾರೆ. ಅವರ ಈ ಆಕರ್ಷಕ ಇನ್ನಿಂಗ್ಸ್ನಲ್ಲಿ 15 ಬೌಂಡರಿಗಳು ಮತ್ತು 15 ಸಿಕ್ಸರ್‌ಗಳನ್ನು ಸೇರಿದ್ದವು. ಅಂತಿಮವಾಗಿ ವೈಭವ್ ಅವರನ್ನು ಮ್ಯಾನಿ ಲಮ್ಸ್ಡೆನ್ ಔಟ್ ಮಾಡಿದರು.
ಇಂಗ್ಲೆಂಡ್ಗೆ ಬೃಹತ್ ಟಾರ್ಗೆಟ್ ನೀಡಿದ
ಭಾರತ: ವೈಭವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 411 ರನ್ಗಳನ್ನು ಪೇರಿಸಿ, ಇಂಗ್ಲೆಂಡ್ಗೆ ಬೃಹತ್ ಟಾರ್ಗೆಟ್ ನೀಡಿದೆ.
ದಾಖಲೆ ಬರೆದ ವೈಭವ್: ಅಂಡರ್-19 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ವೈಭವ್ ಬರೆದಿದ್ದಾರೆ. ಸ್ಪಿನ್ನರ್ ಫರ್ಹಾನ್ ಅಹ್ಮದ್ ಅವರ 14.1 ಓವರ್‌ನಲ್ಲಿ ಲಾಂಗ್ ಆಫ್ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ವೈಭವ್, ಡೆವಾಲ್ಡ್ ಬ್ರೆವಿಸ್ ದಾಖಲೆಯನ್ನು ಮುರಿದರು. ಬೇಬಿ ಎಬಿ ಖ್ಯಾತಿಯ ದಕ್ಷಿಣ ಆಫ್ರಿಕಾದ ಬ್ರೆವಿಸ್ 2022ರ ಅಂಡರ್-19 ವಿಶ್ವಕಪ್‌ನಲ್ಲಿ ಆರು ಪಂದ್ಯಗಳಲ್ಲಿ 20 ಸಿಕ್ಸರ್‌ಗಳನ್ನು ಬಾರಿಸಿದ್ದರು. ಆದರೆ ವೈಭವ್ 28* ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅವರ ದಾಖಲೆಯನ್ನು ಮುರಿದಿದ್ದಾರೆ.














