ನವದೆಹಲಿ: ಕಾಂಗ್ರೆಸ್ ಪಕ್ಷ 1,700 ಕೋಟಿ ರೂ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆ ನೋಟೀಸ್ ಜಾರಿ 2017-18ರಿಂದ 2020-21ರ ಅಸೆಸ್ಮೆಂಟ್ ವರ್ಷಕ್ಕೆ ಬಾಕಿ ಉಳಿದಿರುವ ಆದಾಯ ತೆರಿಗೆ ಹಣ, ಅದಕ್ಕೆ ಬಡ್ಡಿ, ಹಾಗು ದಂಡ ಸೇರಿ ಒಟ್ಟು 1,700 ಕೋಟಿ ರೂ ಬರಬೇಕಿದೆ ಎಂದು ಈ ನೋಟೀಸ್ನಲ್ಲಿ ಐಟಿ ಇಲಾಖೆ ಹೇಳಿದೆ. ಟ್ಯಾಕ್ಸ್ ನೋಟೀಸ್ಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ನಿನ್ನೆ ಗುರುವಾರ ತಿರಸ್ಕರಿಸಿತ್ತು. ಅದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ನೋಟೀಸ್ ನೀಡಿದೆ.
ಆದಾಯ ತೆರಿಗೆ ಇಲಾಖೆಯ ನೋಟೀಸ್ ಪ್ರಶ್ನಿಸಿ ತಾನು ಸಲ್ಲಿಸಿದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆದಂತಾಗಿದೆ. ಉಚ್ಚ ನ್ಯಾಯಾಲಯದ ಅಭಿಪ್ರಾಯಕ್ಕೆ ಎದುರಾಗಿ ಸುಪ್ರೀಂಕೋರ್ಟ್ನ ಮೊರೆ ಬೀಳುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆ ಆರಂಭಕ್ಕೆ ದಿನಗಣನೆ ನಡೆದಿರುವಂತೆಯೇ ಕಾಂಗ್ರೆಸ್ಗೆ ಫಂಡಿಂಗ್ ಸಮಸ್ಯೆ ಎದುರಾಗಿದೆ. 200 ಕೋಟಿ ರೂ ಪೆನಾಲ್ಟಿ ಹಾಕಿರುವ ಐಟಿ ಇಲಾಖೆ ಕಾಂಗ್ರೆಸ್ನ ಕೆಲ ಬ್ಯಾಂಕ್ ಖಾತೆಗಳನ್ನು ಅಟ್ಯಾಚ್ ಮಾಡಿದೆ.
ತನ್ನ ಬ್ಯಾಂಕ್ ಖಾತೆಗಳನ್ನು ಐಟಿ ಇಲಾಖೆ ಮುಟ್ಟುಗೋಲು ಹಾಕಿದೆ. ಹಣ ತೆಗೆಯಲು ಅಗುತ್ತಿಲ್ಲ ಎಂದು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಆರೋಪ ಮಾಡಿ ಅದಕ್ಕೆ ಆಡಳಿತಾರೂಢ ಬಿಜೆಪಿಯನ್ನು ದೂಷಿಸಿತ್ತು. ಅಕೌಂಟ್ ಮುಟ್ಟುಗೋಲು ಹಾಕಿಕೊಂಡಿರುವ ಕ್ರಮವು ಪ್ರಜಾತಂತ್ರ ವ್ಯವಸ್ಥೆ ಮೆಲೆ ನಡೆದ ಆಕ್ರಮಣ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಕಾಂಗ್ರೆಸ್ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ 1,700 ಕೋಟಿ ರೂ. ಪಾವತಿಸಬೇಕೆಂಬ ಹೊಸ ನೋಟಿಸ್ ನೀಡಿದ ಬೆನ್ನಲ್ಲೇ ಸಿಪಿಐ ಪಕ್ಷವೂ ಐಟಿ ಇಲಾಖೆಯಿಂದ ನೋಟಿಸ್ ಸ್ವೀಕರಿಸಿದೆ.
ಇತ್ತೀಚಿನ ವರ್ಷಗಳಲ್ಲಿ ತೆರಿಗೆ ವಿವರಗಳನ್ನು
ಸಲ್ಲಿಸಲು ಹಳೆಯ ಪಾನ್ ಕಾರ್ಡ್ ಬಳಸಿರುವುದಕ್ಕಾಗಿ 11 ಕೋಟಿ ರೂಪಾಯಿ ‘‘ಬಾಕಿ’’ ತೆರಿಗೆ ಪಾವತಿಸುವಂತೆ ಸೂಚಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ)ಕ್ಕೂ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸಿದೆ.
ಬಿಜೆಪಿ 4,600 ಕೋಟಿ ರೂ. ದಂಡಕ್ಕೆ ಅರ್ಹ, ಆದಾಯ ತೆರಿಗೆ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆಯೇ?: ಕಾಂಗ್ರೆಸ್ ಪ್ರಶ್ನೆ
2017-18ರಲ್ಲಿ, 1,297 ವ್ಯಕ್ತಿಗಳಿಂದ ಪಡೆದುಕೊಂಡಿರುವ 42 ಕೋಟಿ ರೂಪಾಯಿ ಮೊತ್ತದ ನಿಧಿಗೆ ಬಿಜೆಪಿಯು ವಿವರಗಳನ್ನು ಸಲ್ಲಿಸಿಲ್ಲ, ಇದು ಜನತಾ ಪ್ರಾತಿನಿಧ್ಯ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಖಜಾಂಚಿ ಅಜಯ್ ಮಾಕೆನ್ ಹೇಳಿದರು. ಅದಕ್ಕಾಗಿ ಆದಾಯ ತೆರಿಗೆ ಇಲಾಖೆಯು ಆ ಪಕ್ಷಕ್ಕೆ 4,600 ಕೋಟಿ ರೂಪಾಯಿ ದಂಡ ವಿಧಿಸಬೇಕು’ಎಂದು ಅವರು ಹೇಳಿದರು. ಈ ಮೊತ್ತದಲ್ಲಿ ಕಳೆದ ಏಳು ವರ್ಷಗಳ ಬಡ್ಡಿಯೂ ಒಳಗೊಂಡಿದೆ ಎಂದರು.
‘ಯಾವ ನ್ಯಾಯಾಲಯವೂ ಏನೂ ಹೇಳುತ್ತಿಲ್ಲ. ಚುನಾವಣಾ ಆಯೋಗ ಮೌನವಾಗಿದೆ. ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆ ಹೊತ್ತಿರುವ ಇತರ ಯಾವ ಸಂಸ್ಥೆಗಳೂ ಮಾತನಾಡುತ್ತಿಲ್ಲ. ಭಾರತೀಯರಿಂದ ಅವರ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದರೋಡೆಗೈಯಲಾಗುತ್ತಿದೆ’’ ಎಂದು ಅವರು ಹೇಳಿದರು.










