ನವದೆಹಲಿ: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಹೇಳಿಕೆ ಕೊಡುವ ಮೂಲಕ ತಮ್ಮ ಸಂಸ್ಕಾರ ಎಂತಹುದು ಎಂದು ತೋರಿಸಿಕೊಟ್ಟಿದ್ದಾರೆ.
ಅಧೀರ್ ರಂಜನ್ ಚೌಧರಿ ರಾಷ್ಟ್ರಪತಿಯನ್ನು ರಾಷ್ಟ್ರಪತ್ನಿ ಎಂದು ಕರೆಯುವ ಮೂಲಕ ಬುಡಕಟ್ಟು ಸಮುದಾಯಕ್ಕೆ, ಮಹಿಳೆ, ಭಾರತದ ಅತ್ಯುನ್ನತ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಹೀಗಾಗಿ ಅಧೀರ್ ರಂಜನ್ ಚೌಧರಿ ಹಾಗೂ ಕಾಂಗ್ರೆಸ್ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಹೋರಾಟ ಆರಂಭಿಸಿತ್ತು. ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಆಗ ಬಿಜೆಪಿ ಸಂಸದರು ಮತ್ತು ಸಚಿವರು ಸೋನಿಯಾ ಗಾಂಧಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಪ್ರತಿಭಟಿಸಿದ್ದರು. ಬುಡಕಟ್ಟು ಸಮುದಾಯಕ್ಕೆ ಅವಮಾನ ಮಾಡಿದರೆ ಬಿಜೆಪಿ ಸಹಿಸಿಕೊಳ್ಳುವುದಿಲ್ಲ. ಸೋನಿಯಾ ಗಾಂಧಿ ಕ್ಷಮೆ ಕೇಳಿದ ನಂತರವಷ್ಟೇ ಕಲಾಪ ನಡೆಯಲಿದೆ’ ಎಂದು
ಹೇಳಿದರು. ಜು.18ರಿಂದ ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಈವರೆಗೆ 10 ದಿನಗಳ ಕಲಾಪ ಸಂಪೂರ್ಣ ವ್ಯರ್ಥವಾಗಿದೆ. ಗುರುವಾರಕ್ಕಿಂತ ಹಿಂದಿನ ಕಲಾಪಗಳು ಜಿಎಸ್‌ಟಿ ಏರಿಕೆ ವಿಷಯದಲ್ಲಿ ವ್ಯರ್ಥವಾಗಿದ್ದರೆ, ಗುರುವಾರದ ಕಲಾಪ ‘ರಾಷ್ಟ್ರಪತ್ನಿ’ ವಿವಾದದಿಂದ ವ್ಯರ್ಥವಾಗಿತ್ತು.
ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಅಧೀರ್ ರಂಜನ್ ಚೌಧರಿ ಯೂ ಟೂರ್ನ್ ಹೊಡೆದಿದ್ದಾರೆ. ದ್ರೌಪದಿ ಮುರ್ಮು ಬಳಿ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. ನಾಲಿಗೆ ಸ್ಲಿಪ್ ಆಗಿ ಈ ಮಾತು ಬಂದಿದೆ. ತಮ್ಮನ್ನು ಕ್ಷಮಿಸಬೇಕು ಎಂದಿದ್ದಾರೆ. ಇಷ್ಟು ದಿನ ತಮ್ಮ ಹೇಳಿಕೆ ಪರ ನಿಂತಿದ್ದ ಅಧೀರ್ ರಂಜನ್ ಚೌಧರಿ ಇದೀಗ ಮೆತ್ತಗಾಗಿದ್ದಾರೆ. ಇತ್ತ ಕಾಂಗ್ರೆಸ್ ಕೂಡ ಸೈಲೆಂಟ್ ಆಗಿದ್ದು ತಮ್ಮ ಪಕ್ಷದ ನಾಯಕನ ಹೇಳಿಕೆಯಿಂದ ತೀವ್ರ ಮುಜುಗರಕ್ಕೀಡಾಗಿದೆ.
















