ಮಹಿಳಾ ಚೆಸ್ ವಿಶ್ವಕಪ್ ಗೆದ್ದ​ ದಿವ್ಯಾ ದೇಶ್​ಮುಖ್; ಈ ಸಾಧನೆಗೈದ ಭಾರತದ ಮೊದಲ ಮಹಿಳೆ

Coastal Bulletin
ಮಹಿಳಾ ಚೆಸ್ ವಿಶ್ವಕಪ್ ಗೆದ್ದ​ ದಿವ್ಯಾ ದೇಶ್​ಮುಖ್; ಈ ಸಾಧನೆಗೈದ ಭಾರತದ ಮೊದಲ ಮಹಿಳೆ

ಜಾರ್ಜಿಯಾದಲ್ಲಿ ನಡೆದ ಫಿಡೆ ಚೆಸ್​ ವಿಶ್ವಕಪ್​​ ಫೈನಲ್​ನಲ್ಲಿ ಭಾರತದ ಸ್ಪರ್ಧಿ 19 ವರ್ಷದ ದಿವ್ಯಾ ದೇಶಮುಖ್ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.

ಇಂದು ನಡೆದ ಟೈ ಬ್ರೇಕರ್​ ಪಂದ್ಯದಲ್ಲಿ ವಿಶ್ವದ ಅಗ್ರ ಮಹಿಳಾ ಚೆಸ್ ಆಟಗಾರ್ತಿಯರಲ್ಲಿ ಒಬ್ಬರಾದ ಕೊನೆರು ಹಂಪಿ ಅವರನ್ನು ಮಣಿಸಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಜಯಿಸಿದರು.

ಇದರೊಂದಿಗೆ ಚೆಸ್ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆಯನ್ನೂ ಅವರು ಬರೆದರು. ಕೊನೆರು ಹಂಪಿ, ಆರ್.ವೈಶಾಲಿ ಮತ್ತು ಹರಿಕಾ ದ್ರೋಣವಲ್ಲಿ ಅವರ ನಂತರ ಗ್ರ್ಯಾಂಡ್‌ಮಾಸ್ಟರ್ ಆದ ನಾಲ್ಕನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ದಿವ್ಯಾ ದೇಶಮುಖ್ ಪಾತ್ರರಾಗಿದ್ದಾರೆ. ಒಟ್ಟಾರೆ 88ನೇ ಇಂಡಿಯನ್ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡಿದ್ದಾರೆ.

ಫೈನಲ್ ಪಂದ್ಯ ಹೇಗಿತ್ತು?: ಫೈನಲ್‌ನಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟಿತ್ತು. ಜು.26 ಮತ್ತು ಜ.27ರಂದು ನಡೆದ ಫೈನಲ್ನ ಎರಡೂ ಕ್ಲಾಸಿಕಲ್ ಪಂದ್ಯ ಡ್ರಾನಲ್ಲಿ ಕೊನೆಗೊಂಡ ಕಾರಣ ಅಂತಿಮ ಪಂದ್ಯ ಟೈ ಬ್ರೇಕರ್‌ ಹಂತ ತಲುಪಿತ್ತು. ಇಂದು ನಡೆದ ರ್ಯಾಪಿಡ್ ಗೇಮ್ನ ಮೊದಲ ಸುತ್ತು ಕೂಡಾ ಡ್ರಾನಲ್ಲಿ ಕೊನೆಗೊಂಡಿತು. ಬಳಿಕ ಎರಡನೇ ಸುತ್ತಿನಲ್ಲಿ ದಿವ್ಯಾ, ಹಂಪಿ ಅವರನ್ನು 1.5-0.5ರ ಅಂತರದಿಂದ ಸೋಲಿಸಿದರು.

ರ್ಯಾಪಿಡ್ ಸುತ್ತಿನಲ್ಲಿ ಟಾಸ್ ಗೆದ್ದ 18ನೇ ವಿಶ್ವ ಶ್ರೇಯಾಂಕಿತ ದಿವ್ಯಾ, ಬಿಳಿ ಕಾಯಿಗಳೊಂದಿಗೆ ಮೊದಲ ಸುತ್ತು ಪ್ರಾರಂಭಿಸಿದರು. ದಿವ್ಯಾ ಆಕ್ರಮಣಕಾರಿಯಾಗಿ ಕಾಣುತ್ತಿದ್ದರೂ ಸಹ 5ನೇ ವಿಶ್ವ ಶ್ರೇಯಾಂಕಿತೆ ಹಂಪಿ ಕಪ್ಪು ಕಾಯಿಗಳೊಂದಿಗೆ ಕಠಿಣ ಪೈಪೋಟಿ ನೀಡಿ ಮೊದಲ ಸುತ್ತನ್ನು ಡ್ರಾ ಮಾಡಿಕೊಂಡರು. ನಂತರ ರ್ಯಾಪಿಡ್ ಸುತ್ತಿನ ಎರಡನೇ ಪಂದ್ಯದಲ್ಲಿ ಕಪ್ಪು ಕಾಯಿಗಳೊಂದಿಗೆ ಪಂದ್ಯ ಪ್ರಾರಂಭಿಸಿದ ದಿವ್ಯಾ

ಆರಂಭದಿಂದಲೂ ಪ್ರಾಬಲ್ಯ ಸಾಧಿಸಿದರು. ಆದರೆ ಕೊನೆರು ಹಂಪಿ ಅವರಿಗೆ ಸಮಯ ನಿರ್ವಹಣೆ ಕಷ್ಟಕರವಾಯಿತು. ಇದರಿಂದಾಗಿ ಕೆಲ ಕಾಯಿಗಳನ್ನು ತಪ್ಪಾಗಿ ಚಲಾವಣೆ ಮಾಡಿದ್ದು ಸೋಲಿಗೆ ಕಾರಣವಾಯಿತು.

ಫಿಡೆ ಚೆಸ್ ವಿಶ್ವಕಪ್​ನ ಫೈನಲ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಚೆಸ್ ಆಟಗಾರ್ತಿಯರಿಬ್ಬರು ಪರಸ್ಪರ ಮುಖಾಮುಖಿಯಾಗಿದ್ದರು. ಇದೀಗ ಇಬ್ಬರೂ 2026ರಲ್ಲಿ ನಡೆಯಲಿರುವ ವಿಮೆನ್ಸ್​ ಕ್ಯಾಂಡಿಡೇಟ್ಸ್​ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದಾರೆ. ಇದರಲ್ಲಿ ಗೆಲುವು ಸಾಧಿಸಿದರೆ ಮುಂದಿನ ವರ್ಷ ನಡೆಯಲಿರುವ ವಿಶ್ವ ಮಹಿಳಾ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಚೀನಾದ ಜು ವೆಂಜುನ್ ಅವರನ್ನು ಎದುರಿಸಲಿದ್ದಾರೆ.

ದಿವ್ಯಾ ದೇಶಮುಖ್ ಹೇಳಿಕೆ: ವಿಶ್ವಕಪ್​ ಗೆಲುವಿನ ನಂತರ ದಿವ್ಯಾ ದೇಶಮುಖ್ ಮಾತನಾಡಿ, "ಈ ರೀತಿ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಸಿಕ್ಕಿದ್ದು ಅದೃಷ್ಟ ಎಂದೇ ನಾನು ಭಾವಿಸುತ್ತೇನೆ. ಇನ್ನೂ ಸಾಧಿಸಲು ಬಹಳಷ್ಟಿದೆ. ಇದು ಕೇವಲ ಆರಂಭ" ಎಂದರು.

ದಿವ್ಯಾ ದೇಶ್​ಮುಖ್​ಗೆ ಸಿಕ್ಕ ಬಹುಮಾನ: ಚಾಂಪಿಯನ್​ ದಿವ್ಯಾ ದೇಶಮುಖ್ 42 ಲಕ್ಷ ರೂಪಾಯಿಗಳ ಬಹುಮಾನ ಪಡೆಯಲಿದ್ದಾರೆ. ರನ್ನರ್ ಅಪ್ ಕೊನೆರು ಹಂಪಿ 35,000 ಅಮೆರಿಕನ್ ಡಾಲರ್ ಅಂದರೆ ಸುಮಾರು 30 ಲಕ್ಷ ರೂಪಾಯಿ ಬಹುಮಾನ ಪಡೆಯಲಿದ್ದಾರೆ.

ದಿವ್ಯಾ ದೇಶ್‌ಮುಖ್ ಕುರಿತು..: ದಿವ್ಯಾ ದೇಶಮುಖ್ ಮಹಾರಾಷ್ಟ್ರದವರು. 2005ರಲ್ಲಿ ನಾಗ್ಪುರದಲ್ಲಿ ಜನಿಸಿರುವ ಇವರು ತಮ್ಮ 5ನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದ್ದರು. 7ನೇ ವಯಸ್ಸಿನಲ್ಲಿ, 2012ರಲ್ಲಿ ಅಂಡರ್-7 ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಸಾಧಿಸಿದ್ದರು. 2021ರಲ್ಲಿ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಪ್ರಶಸ್ತಿ ಗೆದ್ದರು. 2023ರಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ ಪ್ರಶಸ್ತಿ ಗೆದ್ದರು.

Leave a Comment