ಇಂಫಾಲ: ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಮಣಿಪುರ ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲು 44 ಶಾಸಕರು ಮುಂದಾಗಿದ್ದಾರೆ. ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿಯಾದ ಬಳಿಕ ಮಾತನಾಡಿರುವ ಬಿಜೆಪಿ ಶಾಸಕ ಥೋಕ್ಚೋಮ್ ರಾಧೇಶ್ಯಾಮ್ ಸಿಂಗ್ ಹೊಸ ಸರ್ಕಾರ ರಚನೆ ಕುರಿತು ಮಾತನಾಡಿದ್ದಾರೆ. 9 ಶಾಸಕರೊಂದಿಗೆ ರಾಜಭವನದಲ್ಲಿ ರಾಜ್ಯಪಾಲರ ಭೇಟಿಯಾಗಿರುವುದಾಗಿ ಅವರು ತಿಳಿಸಿದ್ದಾರೆ.
ಜನರ ಇಚ್ಛೆಯಂತೆ 44 ಶಾಸಕರು ಸರ್ಕಾರವನ್ನು ರಚಿಸಲು ಸಿದ್ಧವಾಗಿದ್ದಾರೆ. ಈ ವಿಚಾರವನ್ನು ರಾಜ್ಯಪಾಲರಿಗೆ ತಿಳಿಸಲಾಗಿದ್ದು, ಈ ಕುರಿತಾಗಿ ಚರ್ಚೆ ನಡೆಸಲಾಗಿದೆ. ನಾವು ಹೇಳಿದ ವಿಚಾರಗಳನ್ನು ರಾಜ್ಯಪಾಲರು ಆಲಿಸಿದ್ದು, ಜನರ ಹಿತಾಸಕ್ತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಸರ್ಕಾರ ರಚಿಸಲು ಹಕ್ಕು ಮಂಡಿಸುತ್ತೀರಾ ಎಂಬ ಪ್ರಶ್ನೆಗೆ ಮಾತನಾಡಿದ ಅವರು, ಬಿಜೆಪಿಯ ಕೇಂದ್ರ ನಾಯಕತ್ವವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಪ್ರತಿಕ್ರಿಯಿಸಿದರು.
ನಾವು ಸಿದ್ಧರಿದ್ದೇವೆ ಎಂದಿರುವುದು ಸರ್ಕಾರ ರಚಿಸಲು ಹಕ್ಕು ಮಂಡಿಸುವುದಕ್ಕೆ ಸಮಾನವಾಗಿದೆ. ಟಿ. ಸತ್ಯಬ್ರತ 44 ಶಾಸಕರನ್ನು ಪ್ರತ್ಯೇಕವಾಗಿ ಮತ್ತು ಜಂಟಿಯಾಗಿ ಭೇಟಿ ಮಾಡಿದ್ದಾರೆ. ಹೊಸ ಸರ್ಕಾರ ರಚನೆಗೆ ಯಾರಿಂದಲೂ ವಿರೋಧ ವ್ಯಕ್ತವಾಗಿಲ್ಲ ಎಂದು ಹೇಳಿದರು.
2023ರಲ್ಲಿ ಆರಂಭವಾದ ಮಣಿಪುರದಲ್ಲಿ ಕುಕಿ-ಝೋ ಮತ್ತು ಮೈತೇಯಿ ಸಮುದಾಯದ ನಡುವಿನ ಜನಾಂಗೀಯ ಸಂಘರ್ಷವನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಟೀಕೆ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದರು. ಕಳೆದ ಫೆಬ್ರವರಿಯಿಂದ
ಮಣಿಪುರ ರಾಷ್ಟ್ರಪತಿಗಳ ಆಡಳಿತದಲ್ಲಿದೆ.
ರಾಜ್ಯ 60 ಶಾಸಕ ಸ್ಥಾನ ಹೊಂದಿದ್ದು, ಸದ್ಯ 59 ಶಾಸಕರಿದ್ದಾರೆ. ಒಂದು ಸ್ಥಾನ ಶಾಸಕನ ಸಾವಿನಿಂದ ತೆರವಾಗಿದೆ. ಇದೀಗ ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಥೋಕ್ಛೋಮ್ ರಾಧೇಶ್ಯಾಮ್ ಸಿಂಗ್ ಮುಂದಾಗಿದ್ದು, 32 ಮೈತೇಯಿ ಶಾಸಕರು, ಮೂವರು ಮಣಿಪುರಿ ಮುಸ್ಲಿಂ ಶಾಸಕರು ಮತ್ತು 9 ನಾಗಾ ಶಾಸಕರು ಬೆಂಬಲ ನೀಡಿದ್ದಾರೆ.
ಕಾಂಗ್ರೆಸ್ 5 ಶಾಸಕರನ್ನು ಹೊಂದಿದ್ದು, ಇವರೆಲ್ಲಾ ಮೈತೇಯಿ ಸಮುದಾಯದವರಾಗಿದ್ದಾರೆ. ಉಳಿದ 10 ಮಂದಿ ಕುಕಿ ಸಮುದಾಯದವರಾಗಿದ್ದಾರೆ. ಇವರಲ್ಲಿ 7 ಮಂದಿ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಇಬ್ಬರು ಕುಕಿ ಪೀಪಲ್ಸ್ ಅಲಯನ್ಸ್ ಹಾಗೂ ಓರ್ವ ಪಕ್ಷೇತರ ಶಾಸಕರಿದ್ದಾರೆ.
2023ರ ಮೇ 3ರಂದು ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ಶಿಫಾರಸು ಸಂಬಂಧ ಮೈತೇಯಿ ಮತ್ತು ಕಿ-ಝೋ ಬುಡಕಟ್ಟು ಗುಂಪುಗಳ ನಡುವೆ ಜನಾಂಗೀಯ ಸಂಘರ್ಷ ಪ್ರಾರಂಭವಾಯಿತು. ಈ ಹಿಂಸಾಚರದಲ್ಲಿ ಕನಿಷ್ಠ 260 ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ನಿರಾಶ್ರಿತರಾದರು.















