ಭಾರತ ಬಿಟ್ಟು ತೊಲಗಿ, ಇಲ್ಲವೇ ದಂಡಸಹಿತ ಜೈಲು ಶಿಕ್ಷೆ ಅನುಭವಿಸಿ: ಪಾಕ್ ಪ್ರಜೆಗಳಿಗೆ ಕೇಂದ್ರದ ಕಠಿಣ ಎಚ್ಚರಿಕೆ

Coastal Bulletin
ಭಾರತ ಬಿಟ್ಟು ತೊಲಗಿ, ಇಲ್ಲವೇ ದಂಡಸಹಿತ ಜೈಲು ಶಿಕ್ಷೆ ಅನುಭವಿಸಿ: ಪಾಕ್ ಪ್ರಜೆಗಳಿಗೆ ಕೇಂದ್ರದ ಕಠಿಣ ಎಚ್ಚರಿಕೆ

ನವದೆಹಲಿ: ಕೇಂದ್ರ ಸರ್ಕಾರ ನಿಗದಿಪಡಿಸಿದ ಗಡುವಿನಂತೆ ಭಾರತದಿಂದ ವಾಪಸ್ ಹೋಗಲು ವಿಫಲರಾದ ಯಾವುದೇ ಪಾಕಿಸ್ತಾನದ ಪ್ರಜೆಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ. ಇದಲ್ಲದೇ, 3 ವರ್ಷ ಜೈಲು ಶಿಕ್ಷೆ ಅಥವಾ ಗರಿಷ್ಠ 3 ಲಕ್ಷ ರೂ.ಗಳ ದಂಡ ಹಾಗೂ ಎರಡನ್ನೂ ವಿಧಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಉಗ್ರರು 26 ಪ್ರವಾಸಿಗರನ್ನು ಕೊಂದು ಹಾಕಿದ ನಂತರ, ಕೇಂದ್ರ ಸರ್ಕಾರ ಪಾಕ್ ಪ್ರಜೆಗಳು ಭಾರತ ಬಿಟ್ಟು ತೊಲಗುವಂತೆ ನೋಟಿಸ್ ನೀಡಿತ್ತು.

ಸಾರ್ಕ್ ವೀಸಾಗಳನ್ನು ಹೊಂದಿರುವವರು ಭಾರತದಿಂದ ನಿರ್ಗಮಿಸಲು ಇರುವ ಗಡುವು ಏಪ್ರಿಲ್ 26. ವೈದ್ಯಕೀಯ ವೀಸಾಗಳನ್ನು ಹೊಂದಿರುವವರು ಏಪ್ರಿಲ್ 29ರೊಳಗೆ ದೇಶ ಬಿಡಬೇಕು. ಅಲ್ಲದೇ, 12 ವಿಭಾಗಗಳ ವೀಸಾಗಳನ್ನು ಹೊಂದಿರುವವರು ಭಾನುವಾರದೊಳಗೆ ಭಾರತ ತೊರೆಯಬೇಕು. ಆಗಮನದ ವೀಸಾ, ವ್ಯಾಪಾರ, ಚಲನಚಿತ್ರ, ಪತ್ರಕರ್ತ, ಸಾರಿಗೆ, ಸಮ್ಮೇಳನ, ಪರ್ವತಾರೋಹಣ, ವಿದ್ಯಾರ್ಥಿ, ಸಂದರ್ಶಕ, ಪ್ರವಾಸಿಗರ ಗುಂಪು ಇದರಡಿ ಬರುತ್ತಾರೆ.

ವಲಸೆ ಮತ್ತು ವಿದೇಶಿಯರ ಕಾಯಿದೆ 2025ರ ಪ್ರಕಾರ, ಭಾರತದಲ್ಲಿ ಅವಧಿ ಮೀರಿ ತಂಗುವಿಕೆ, ವೀಸಾ ಷರತ್ತುಗಳನ್ನು ಉಲ್ಲಂಘಿಸುವುದು ಅಥವಾ ನಿರ್ಬಂಧಿತ ಪ್ರದೇಶಗಳಲ್ಲಿ ಅತಿಕ್ರಮಣ ಮಾಡಿದರೆ 3 ವರ್ಷಗಳ

ಜೈಲು ಶಿಕ್ಷೆ ಮತ್ತು 3 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ, ದೇಶ ತೊರೆಯಲು ನಿಗದಿಪಡಿಸಿದ ಗಡುವು ಮೀರಿ ಯಾವುದೇ ಪಾಕಿಸ್ತಾನಿ ಪ್ರಜೆ ಭಾರತದಲ್ಲಿ ಉಳಿಯದಂತೆ ನೋಡಿಕೊಳ್ಳುವಂತೆ ತಿಳಿಸಿದ್ದರು.

ಮುಖ್ಯಮಂತ್ರಿಗಳೊಂದಿಗೆ ಶಾ ಅವರ ದೂರವಾಣಿ ಸಂಭಾಷಣೆಯ ನಂತರ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಮುಖ್ಯ ಕಾರ್ಯದರ್ಶಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿದ್ದರು. ಈ ಸಂದರ್ಭದಲ್ಲಿ ವೀಸಾ ರದ್ದುಪಡಿಸಿದ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ನಿಗದಿತ ಗಡುವಿನೊಳಗೆ ಭಾರತ ತೊರೆಯಬೇಕು ಎಂದು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದ್ದರು.

ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತೀರಾ ಹದಗೆಟ್ಟಿದೆ. ಪಾಕ್ ಪ್ರಜೆಗಳಿಗೆ ವೀಸಾಗಳನ್ನು ರದ್ದುಗೊಳಿಸುವುದೂ ಸೇರಿದಂತೆ ಹಲವು ಬಿಗಿ ಕ್ರಮಗಳನ್ನು ಭಾರತ ಘೋಷಿಸಿದೆ.

Leave a Comment