ಹಾಸನ ಅಶ್ಲೀಲ ವಿಡಿಯೋ ಕೇಸ್ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಮೇ.31 ಕ್ಕೆ ಬೆಂಗಳೂರಿಗೆ!

Coastal Bulletin
ಹಾಸನ ಅಶ್ಲೀಲ ವಿಡಿಯೋ ಕೇಸ್ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಮೇ.31 ಕ್ಕೆ ಬೆಂಗಳೂರಿಗೆ!

ಬೆಂಗಳೂರು: ಲೋಕಸಭಾ ಚುನಾವಣೆಯ ಬಳಿಕ ನಾಪತ್ತೆಯಾಗಿದ್ದ ಪ್ರಜ್ವಲ್‌ ರೇವಣ್ಣ ಕೊನೆಗೂ ಪ್ರತ್ಯಕ್ಷ. ಮೇ 31 ರಂದು ನಾನು ರಾಜ್ಯಕ್ಕೆ ಬರುತ್ತೇನೆ ಎಂದು ಪ್ರಜ್ವಲ್‌ ರೇವಣ್ಣ ಹೇಳಿಕೆ ನೀಡಿದ್ದಾರೆ.

ಇಡೀ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಒಂದು ತಿಂಗಳ ಬಳಿಕ ಪ್ರತ್ಯಕ್ಷವಾಗಿದ್ದಾರೆ. ಏಪ್ರಿಲ್ 26ರಂದು ಮತದಾನ ಮಾಡಿದ ನಂತರ ವಿದೇಶಕ್ಕೆ ತೆರಳಿದ್ದ ಸಂಸದ ಪ್ರಜ್ವಲ್ ರೇವಣ್ಣ ಅಂದಿನಿಂದ ಇಂದಿನಿವರೆಗೂ ನಾಪತ್ತೆಯಾಗಿದ್ದರು. ಇನ್ನು ರಾಜ್ಯದಲ್ಲಿ ಹಾಸನದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ, ವಿಡಿಯೋಗಳ ಆಧಾರದಲ್ಲಿ ಎಸ್‌ಐಟಿ ರಚನೆ, ರಾಜಕೀಯ ಕೆಸರೆರಚಾಟ, ಪ್ರಜ್ವಲ್ ಅವರ ಅಪ್ಪ ರೇವಣ್ಣನ ಬಂಧನ ಮತ್ತು ಬಿಡುಗಡೆ, ಪ್ರಜ್ವಲ್ ರೇವಣ್ಣ ಮೇಲೆ ನೋಟೀಸ್ ಜಾರಿ ಸೇರಿದಂತೆ ಹಲವು ಘಟನೆಗಳು ನಡೆದಿವೆ. ಈಗ ಬರೋಬ್ಬರಿ 1 ತಿಂಗಳ ನಂತರ ಮಾಧ್ಯಮದ ಮುಂದೆ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷರಾಗಿದ್ದಾರೆ.

ವಿದೇಶದಿಂದ ವಿಡಿಯೋ ರಿಲೀಸ್‌ ಮಾಡಿದ ಅವರು ಬೆಂಗಳೂರಿಗೆ (Bengaluru) ಬಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ (SIT) ಮುಂದೆ ಹಾಜರಾಗಿ ಉತ್ತರ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಕುಟುಂಬಸ್ಥರು ಮತ್ತು

ರಾಜ್ಯದ ಜನತೆಯಲ್ಲಿ ಪ್ರಜ್ವಲ್‌ ರೇವಣ್ಣ ಕ್ಷಮೆ ಕೇಳಿದ್ದಾರೆ.

ವಿದೇಶಕ್ಕೆ ಹೋಗುವ ಬಗ್ಗೆ ಮೊದಲೇ ಪ್ಲಾನ್ ಆಗಿತ್ತು. ವಿದೇಶಕ್ಕೆ ಹೋಗುವಾಗ ನನ್ನ ಮೇಲೆ ಯಾವುದೇ ಆರೋಪ ಇರಲಿಲ್ಲ. ನಾನು ವಿದೇಶದಲ್ಲಿದ್ದಾಗ ಯೂಟ್ಯೂಬ್‌ ನ್ಯೂಸ್‌ ನೋಡಿ ನನ್ನ ಮೇಲೆ ಗಂಭೀರ ಆರೋಪ ಬಂದಿರುವುದು ಕಂಡುಬಂದಿದೆ. ಇದಾದ ನಂತರ ನನ್ನ ಹೆಸರನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಎಸ್‌ಐಟಿ ನೋಟಿಸ್‌ ನೀಡಿದ ವಿಚಾರ ಗೊತ್ತಾಯಿತು. ನಾನು ರಾಜಕೀಯವಾಗಿ ಬೆಳೆಯಬಾರದು ಎಂಬ ಕಾರಣಕ್ಕೆ ನನ್ನ ಮೇಲೆ ಪಿತೂರಿ ಮಾಡಿದ್ದಾರೆ.

ನನ್ನ ಮೇಲೆ ರಾಜಕೀಯ ಪಿತೂರಿ ಮಾಡಲಾಗಿದೆ. ಚುನಾವಣೆ ಸಮಯದಲ್ಲಿ ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ ನಾಯಕರ ಆರೋಪದಿಂದ ನಾನು ಮಾನಸಿಕ ಖಿನ್ನತೆಗೆ ಜಾರಿದ್ದೆ. ಈ ಖಿನ್ನತೆಯಿಂದ ಹೊರ ಬರದಲು ಕೆಲ ಸಮಯ ಬೇಕಿತ್ತು. ನನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ಈ ಸುಳ್ಳು ಪ್ರಕರಣದಿಂದ ನಾನು ಹೊರ ಬರುತ್ತೇನೆ. ಬಂದ ಮೇಲೆ ಎಲ್ಲರಿಗೂ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.

Leave a Comment