ಬರೇಲಿ (ಉತ್ತರ ಪ್ರದೇಶ): ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತದಲ್ಲಿ ವಾಸಿಸುವ ಪಾಕಿಸ್ತಾನಿಗಳು 48 ಗಂಟೆಗಳ ಒಳಗೆ ದೇಶವನ್ನು ತೊರೆಯುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದರಿಂದ ಕಳೆದ ಹಲವು ದಿನಗಳಿಂದ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ವಾಸಿಸುವ ಪಾಕ್ ನಾಗರಿಕರಲ್ಲಿ ಭೀತಿ ಉಂಟಾಗಿದೆ. ಬರೇಲಿಯಲ್ಲೇ 34 ಪಾಕಿಸ್ತಾನಿಗಳು ದೀರ್ಘಾವಧಿಯ ವೀಸಾದಲ್ಲಿ ವಾಸಿಸುತ್ತಿದ್ದು, ಅವರೆಲ್ಲರೂ ಭಾರತವನ್ನು ತೊರೆಯಬೇಕಾದ ಸಂದರ್ಭ ಎದುರಾಗಿದೆ. ಈ ಪೈಕಿ 45 ದಿನಗಳ ವೀಸಾದ ಮೇಲೆ ಭಾರತಕ್ಕೆ ಬಂದ ಶಹನಾಜ್ ಎಂಬ ಪಾಕ್ ಮಹಿಳೆಯೂ ಸೇರಿದ್ದಾರೆ!
ಕೇವಲ 45 ದಿನಗಳ ವೀಸಾದ ಮೇಲೆ ಭಾರತಕ್ಕೆ ಬಂದ ಶಹನಾಜ್, ಈಗ ಪಾಕಿಸ್ತಾನಕ್ಕೆ ಹೇಗೆ ಹಿಂತಿರುಗುತ್ತಾರೆ ಎಂಬುವುದೇ ಪ್ರಶ್ನೆಯಾಗಿ ಉಳಿದಿದೆ. ಪಾಕಿಸ್ತಾನದ ಪ್ರಜೆಗಳಿಗೆ 48 ಗಂಟೆಗಳ ಕಾಲಾವಕಾಶ ನೀಡಿರುವ ಬಗ್ಗೆ ಹಾಗೂ ಕೇಂದ್ರ ಸರ್ಕಾರ ನಿನ್ನೆ ತೆಗೆದುಕೊಂಡ ಕೆಲವು ರಾಜತಾಂತ್ರಿಕ ಮಹತ್ವದ ನಿರ್ಧಾರಗಳ ಬಗ್ಗೆ ಶಹನಾಜ್ ಅವರನ್ನು ಕೇಳಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸರ್ಕಾರ ನೀಡುವ ಯಾವುದೇ ಆದೇಶವನ್ನು ತಾನು ಪಾಲಿಸುವುದಾಗಿ ಹೇಳಿದ್ದಾರೆ.
ಸರ್ಕಾರದ ಅಣಿತಿಯಂತೆ ನಡೆದುಕೊಳ್ಳುವೆ: 40 ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ತನ್ನ ವಿವಾಹವಾಗಿದ್ದು, ಮಾರ್ಚ್‌ನಲ್ಲಿ 45 ದಿನಗಳ ವೀಸಾದ ಮೇಲೆ ಭಾರತಕ್ಕೆ ಬಂದಿರುವೆ. ನನ್ನ ತಾಯಿ ಬರೇಲಿಯ ಬರಾದರಿಯಲ್ಲಿ ವಾಸಿಸುತ್ತಿದ್ದು, ಅವರನ್ನು ಕಾಣಲು ತಾನು ಆಗ್ಗಾಗ್ಗೆ ಇಲ್ಲಿಗೆ ಭೇಟಿ ನೀಡುತ್ತಿರುತ್ತೇನೆ. ಮಾರ್ಚ್‌ನಲ್ಲಿ ಪಾಕಿಸ್ತಾನದಿಂದ ಬರುತ್ತಿದ್ದಾಗ ರೈಲಿನಲ್ಲಿ ನನ್ನ ಪರ್ಸ್ ಕಳ್ಳತನವಾಗಿದೆ. ಅದರಲ್ಲಿ ನನ್ನ ಪಾಸ್‌ಪೋರ್ಟ್ ಸೇರಿದಂತೆ ಪ್ರಮುಖ ದಾಖಲೆಗಳಿದ್ದು, ಎಲ್ಲವೂ ಕಳ್ಳತನವಾಗಿವೆ. ಬರೇಲಿಯ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದು, ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಿರುವೆ. ನಾನು ಪಾಕಿಸ್ತಾನಕ್ಕೆ ಹೋಗಲು ಸಿದ್ಧ. ಆದರೆ, ಸೂಕ್ತ ದಾಖಲೆಗಳಿಲ್ಲದೇ ಅದು ಕಷ್ಟ. ಭಾರತ ಸರ್ಕಾರದ ಆದೇಶದಂತೆ ನಾನು ನಡೆದುಕೊಳ್ಳುವೆ. ಇಲ್ಲಿಂದ ಯಾವುದೇ ಕಾಗದ ನೀಡಿದರೂ ತೆಗೆದುಕೊಳ್ಳಲು ಸಿದ್ಧ ಎಂದು ಶಹನಾಜ್ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸ್
ಅಧಿಕಾರಿ ಪ್ರತಿಕ್ರಿಯೆ ಹೀಗಿದೆ; ಪಾಕಿಸ್ತಾನಿ ಮಹಿಳೆ ಶಹನಾಜ್ ಅವರ ಪರ್ಸ್ ರೈಲಿನಲ್ಲಿ ಕಳೆದುಹೋಗಿದೆ. ಅದರಲ್ಲಿದ್ದ ಅವರ ಪ್ರಮುಖ ದಾಖಲೆಗಳು ಇದ್ದವು. ಈಗ ಬಂದಿರುವ ಆದೇಶವನ್ನು ಅನುಸರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ, 34 ಪಾಕಿಸ್ತಾನಿಗಳು ದೀರ್ಘಾವಧಿಯ ವೀಸಾದ ಮೇಲೆ ಬರೇಲಿಯಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ಶಹನಾಜ್ 45 ದಿನಗಳ ವೀಸಾದ ಮೇಲೆ ತನ್ನ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ಬಂದಿರುವುದಾಗಿ ಬರೇಲಿ ಎಸ್‌ಎಸ್‌ಪಿ ಅನುರಾಗ್ ಆರ್ಯ ತಿಳಿಸಿದ್ದಾರೆ.
ಶಹನಾಜ್ ಸೇರಿದಂತೆ ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ ಬರೇಲಿಯಲ್ಲಿ ಸದ್ಯ 34 ಪಾಕಿಸ್ತಾನಿ ಪ್ರಜೆಗಳಿದ್ದು, ಇವರ ಅನೇಕ ಸಂಬಂಧಿಕರು ಭಾರತದಲ್ಲಿದ್ದಾರೆ. ಅವರೆಲ್ಲರೂ 48 ಗಂಟೆಗಳ ಒಳಗೆ ಭಾರತವನ್ನು ತೊರೆಯಬೇಕಾದ ಸಂದರ್ಭ ಎದುರಾಗಿದೆ.
26 ಪ್ರವಾಸಿಗರನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಭಾರತ - ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಸ್ಥಗಿತವೂ ಸೇರಿದಂತೆ ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿಗಳಿಗೆ 7 ದಿನಗಳೊಳಗೆ ಭಾರತ ಬಿಟ್ಟು ಹೊರಡುವಂತೆ ಸೂಚಿಸಲಾಗಿದೆ. ಜೊತೆಗೆ ಭಾರತದಲ್ಲಿರುವ ಪಾಕಿಸ್ತಾನಿ ಪ್ರವಾಸಿಗರಿಗೂ 48 ಗಂಟೆಗಳಲ್ಲಿ ದೇಶ ಬಿಡುವಂತೆ ಆದೇಶಿಸಲಾಗಿದೆ. ಇದರ ಜೊತೆ ಅಟ್ಟರಿ ವಾಘಾ ಗಡಿಯನ್ನು ಬಂದ್ ಮಾಡಲಾಗಿದ್ದು, ಭಾರತದ ಜೊತೆ ಇನ್ನು ಮುಂದೆ ಪಾಕಿಸ್ತಾನಕ್ಕೆ ಯಾವುದೇ ಉತ್ತಮ ಸಂಬಂಧಗಳು ಇರುವುದಿಲ್ಲ.















