ಐಸಿಸ್ ನಂಟು ಹೊಂದಿರುವ ಆರೋಪ ಉಳ್ಳಾಲದ ಮಾಜಿ ಶಾಸಕ ದಿ. ಇದಿನಬ್ಬರ ಮೊಮ್ಮಗನಿಗೆ ಜಾಮೀನು.

Coastal Bulletin
ಐಸಿಸ್ ನಂಟು ಹೊಂದಿರುವ ಆರೋಪ ಉಳ್ಳಾಲದ ಮಾಜಿ ಶಾಸಕ ದಿ. ಇದಿನಬ್ಬರ ಮೊಮ್ಮಗನಿಗೆ ಜಾಮೀನು.

ಮಂಗಳೂರು: ಐಸಿಸ್ (ISIS) ನಂಟು ಪ್ರಕರಣದಲ್ಲಿ ಎನ್ ಐಎಯಿಂದ ಬಂಧನಕ್ಕೊಳಗಾಗಿದ್ದ ಉಳ್ಳಾಲದ ಮಾಜಿ ಶಾಸಕ ದಿ. ಇದಿನಬ್ಬರವರ ಮೊಮ್ಮಗ ಅಮ್ಮರ್ ಅಬ್ದುಲ್ ರೆಹಮಾನ್ ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.

2021 ರ ಆಗಸ್ಟ್ 21 ರಂದು ಬಂಧನಕ್ಕೊಳಗಾಗಿದ್ದ ರೆಹಮಾನ್ ಮೊಬೈಲ್ ನಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳಿಗೆ ಐಸಿಸ್ ಪರವಾದ  ಬಾವುಟ, ಕರಪತ್ರ ವೀಡಿಯೋಗಳು ಸಿಕ್ಕಿದ್ದವು. ಇದನ್ನು ಕೋರ್ಟ್‍ಗೂ ನೀಡಲಾಗಿತ್ತು. ಈ ನಡುವೆ ಬಂಧನ ಪ್ರಶ್ನಿಸಿ ವಿಚಾರಣಾಧೀನ ಕೋರ್ಟ್ ನಲ್ಲಿ ರೆಹಮಾನ್ ಜಾಮೀನು ಅರ್ಜಿ ಸಲ್ಲಿಸಿದ್ದು, ಕೋರ್ಟ್ ಜಾಮೀನು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಸುದೀರ್ಘ ವಿಚಾರಣೆ ಬಳಿಕ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.

ಜಾಮೀನು ಆದೇಶದಲ್ಲಿ ಹಲವು ಅಂಶಗಳನ್ನು ದೆಹಲಿ ಹೈಕೋರ್ಟ್ ಉಲ್ಲೇಖಿಸಿದ್ದು, ಉಗ್ರ ಸಂಘಟನೆ ಜೊತೆಗಿನ ಆಕರ್ಷಣೆಯನ್ನು ಉಗ್ರ ನಂಟು ಎನ್ನಲು ಆಗಲ್ಲ. ಐಸಿಸ್ ಬಾವುಟ, ಕರಪತ್ರ ಮೊಬೈಲ್ ನಲ್ಲಿದ್ದರೆ ಉಗ್ರ ಎನ್ನಲು ಪೂರಕ ಸಾಕ್ಷ್ಯವಲ್ಲ. ಇವುಗಳೆಲ್ಲ ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ ನೆಟ್ ನಲ್ಲಿ ಸಿಗುತ್ತದೆ.

ಕುತೂಹಲ ಇರೋ ಯಾರು ಬೇಕಾದರೂ ಮೊಬೈಲ್, ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಬಹುದು. ಹಾಗಾಗಿ ಇದನ್ನ ಇಟ್ಟು ಕೊಂಡವರನ್ನ ಐಸಿಸ್ ನಂಟನ್ನ ಸಾಬೀತುಪಡಿಸಲು ಆಗಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಈಗಾಗಲೇ ಪ್ರಕರಣ ಸಂಬಂಧ ಹಲವು ಜನರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿದೆ. ಅಮ್ಮರ್ ಅಬ್ದುಲ್ ರೆಹಮಾನ್ ಜೊತೆಗೆ ಇದಿನಬ್ಬ ಅವರ ಸೊಸೆ ದೀಪ್ತಿ ಮಾರ್ಲ ಅಲಿಯಾಸ್‌ ಮರಿಯಂಳನ್ನೂ ಬಂಧಿಸಿದೆ. ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ, ಇದಿನಬ್ಬ ಮಗ ಬಿ‌.ಎಂ.ಭಾಷಾರ ಮಗ ಅನಾಸ್ ಅಬ್ದುಲ್ ಅವರ ಪತ್ನಿ. ಅನಾಸ್ ಅಬ್ದುಲ್ ರೆಹಮಾನ್ ಮದುವೆಯಾಗಿ ಇಸ್ಲಾಂಗೆ ಮತಾಂತರಗೊಂಡಿದ್ದ ದೀಪ್ತಿ ಮಾರ್ಲ, ಮರಿಯಂ ಎಂದು ಹೆಸರು ಬದಲಿಸಿಕೊಂಡಿದ್ದಳು. ಅಮ್ಮರ್ ಅಬ್ದುಲ್ ರೆಹಮಾನ್ ಬಂಧನದ ಬಳಿಕ, ಜನವರಿ 4ರಂದು ಉಳ್ಳಾಲದಲ್ಲಿ ಮರಿಯಂಳನ್ನು ಎನ್‌ಐಎ ಬಂಧಿಸಿತ್ತು.

Leave a Comment