ಕುರುಕ್ಷೇತ್ರ: ಕರ್ನಾಟಕದ ಮಂಡ್ಯದಲ್ಲಿ ನಡೆದ ಕೋಮುಗಲಭೆ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರು ಗಣೇಶನ ವಿಗ್ರಹವನ್ನಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಸ್ಗೆ ಹತ್ತಿಸಿಕೊಂಡು ಪೊಲೀಸರು ಅವರ ಕೈಯಲ್ಲಿದ್ದ ಗಣೇಶನ ವಿಗ್ರಹವನ್ನು ಪೊಲೀಸ್ ವಾಹನದಲ್ಲಿಟ್ಟುಕೊಂಡರು. ಪೊಲೀಸ್ ವಾಹನದೊಳಗೆ ಲಾಕ್ ಆಗಿರುವ ಗಣೇಶನ ಮೂರ್ತಿಯ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಕೂಡ ಮಾತನಾಡಿದ್ದಾರೆ.
ಕುರುಕ್ಷೇತ್ರದಲ್ಲಿ ನಡೆದ ರ್ಯಾಲಿಯ ವೇಳೆ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಹರಿಯಾಣದ ಕುರುಕ್ಷೇತ್ರದಲ್ಲಿ ಪ್ರಧಾನಿ ಮೋದಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಗಣಪತಿಯನ್ನು ಕೂಡ ಕಂಬಿ ಹಿಂದೆ ಹಾಕಲಾಗಿದೆ. ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಗಣಪತಿಯನ್ನೂ ಕಂಬಿ ಹಿಂದೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ದೇಶವೇ ಇಂದು ಗಣೇಶ ಉತ್ಸವವನ್ನು ಆಚರಿಸುತ್ತಿದೆ. ಅದಕ್ಕೆ ಕಾಂಗ್ರೆಸ್ ಅಡ್ಡಿಯಾಗುತ್ತಿದೆ ಎಂದು ಮೋದಿ ಟೀಕಿಸಿದ್ದಾರೆ.
ಏನಿದು ಘಟನೆ?:
ಸೆ.12ರಂದು ನಾಗಮಂಗಲ ತಾಲೂಕಿನಲ್ಲಿ ನಡೆದ
ನಿಮಜ್ಜನ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೆಂಗಳೂರಿನ ಟೌನ್‌ಹಾಲ್ ಬಳಿ ಗಣೇಶ ಮೂರ್ತಿ ಹೊತ್ತ ಪ್ರತಿಭಟನಾಕಾರರ ಗುಂಪೊಂದು ಪ್ರತಿಭಟನೆ ನಡೆಸಿತು. ಕಲ್ಲು ತೂರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಘರ್ಷಣೆಯ ನಂತರ ಬಂಧಿಸಲ್ಪಟ್ಟ ಹಿಂದೂ ಸದಸ್ಯರ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಯಿತು.
ಆದರೆ, ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಹೀಗಾಗಿ, ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಸುಮಾರು 40 ವ್ಯಕ್ತಿಗಳನ್ನು ಬಂಧಿಸಿದರು. ಈ ವೇಳೆ ಗಣೇಶನ ವಿಗ್ರಹವನ್ನು ಪ್ರತಿಭಟನಾಕಾರರಿಂದ ತೆಗೆದುಕೊಂಡು ಪೊಲೀಸ್ ವ್ಯಾನ್‌ನಲ್ಲಿ ಇರಿಸಲಾಯಿತು. ಇದು ತೀವ್ರ ಚರ್ಚೆಗೆ ಕಾರಣವಾಗಿದೆ.















