ನವದೆಹಲಿ, ಮೇ 13: ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೆ ಸಿಂಧೂ ಜಲ ಒಪ್ಪಂದವನ್ನು (Indus Water Treaty) ತಡೆಹಿಡಿಯಲಾಗುವುದು ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ. ಭಾರತೀಯ ಸಶಸ್ತ್ರ ಪಡೆಗಳು ಮತ್ತು ಭಾರತೀಯ ವಾಯುಪಡೆ (ಐಎಎಫ್) ಪಾಕಿಸ್ತಾನಿ ವಾಯುನೆಲೆಗಳನ್ನು ಅತ್ಯಂತ ಪರಿಣಾಮಕಾರಿ ಕ್ರಮದಿಂದ ನಿಷ್ಕ್ರಿಯಗೊಳಿಸಿವೆ. ಭಾರತೀಯ ಸಶಸ್ತ್ರ ಪಡೆಗಳ ಬಲದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಕದನ ವಿರಾಮಕ್ಕೆ ಮುಂದಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಪಾಕಿಸ್ತಾನದ ಕಡೆಯಿಂದ ನೀಡಲಾದ ಹೇಳಿಕೆಯನ್ನು ನಾವು ನೋಡಿದ್ದೇವೆ. ಕೈಗಾರಿಕಾ ಮಟ್ಟದಲ್ಲಿ ಭಯೋತ್ಪಾದನೆಯನ್ನು ಪೋಷಿಸಿದ ರಾಷ್ಟ್ರವು ಅದರ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸುವ ಮೂಲಕ ಪಾಕಿಸ್ತಾನ ತನ್ನನ್ನು ತಾನು ಮೂರ್ಖನನ್ನಾಗಿ ಮಾಡಿಕೊಳ್ಳುತ್ತಿದೆ. ಭಾರತ ನಾಶಪಡಿಸಿದ ಭಯೋತ್ಪಾದಕ ಮೂಲಸೌಕರ್ಯ ತಾಣಗಳು ಭಾರತೀಯರ ಸಾವಿಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಇತರ ಅನೇಕ ಅಮಾಯಕರ ಸಾವಿಗೆ ಕಾರಣವಾಗಿವೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ಪೂರ್ತಿಯಾಗಿ ಹಿಂಪಡೆಯುವವರೆಗೂ ಭಾರತ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಮೇ 22ರಂದು 25 ಪ್ರವಾಸಿಗರು ಮತ್ತು ಒಬ್ಬ ಸ್ಥಳೀಯ ಕಾಶ್ಮೀರಿ ಸಾವನ್ನಪ್ಪಿದ ಮಾರಕ ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದ ಕೆಲವು ದಿನಗಳ ನಂತರ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪಾಕಿಸ್ತಾನದ ಭೂಪ್ರದೇಶದೊಳಗಿನ ಭಯೋತ್ಪಾದಕ
ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಕಿತ್ತುಹಾಕುವುದು ಸೇರಿದಂತೆ ಭಾರತದ ಕಾರ್ಯತಂತ್ರದ ಭಯೋತ್ಪಾದನಾ ನಿಗ್ರಹ ಪ್ರಯತ್ನಗಳ ಬಗ್ಗೆ ಅವರು ವಿವರಗಳನ್ನು ನೀಡಿದರು.
ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ನಂತರ ಜಮ್ಮು ಮತ್ತು ಕಾಶ್ಮೀರವು ಉದ್ವಿಗ್ನ ಪರಿಸ್ಥಿತಿಯ ನಂತರ ಸಹಜ ಸ್ಥಿತಿಗೆ ಮರಳಲು ಪ್ರಾರಂಭಿಸಿದೆ. ಕೇಂದ್ರಾಡಳಿತ ಪ್ರದೇಶದ ಕೆಲವು ಭಾಗಗಳಲ್ಲಿನ ಶಾಲೆಗಳು ಮತ್ತು ಕಾಲೇಜುಗಳು ಇಂದಿನಿಂದ ಮತ್ತೆ ತೆರೆಯಲ್ಪಡುತ್ತವೆ ಎಂದು ಜೈಸ್ವಾಲ್ ಘೋಷಿಸಿದರು.
ಪಿಒಕೆ ವಿಷಯ ಇತ್ಯರ್ಥವಾಗಲಿ:
ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಪರಿಹರಿಸಬೇಕು ಎಂಬುದು ನಮ್ಮ ದೀರ್ಘಕಾಲದ ರಾಷ್ಟ್ರೀಯ ನಿಲುವು. ಆ ನೀತಿ ಬದಲಾಗಿಲ್ಲ. ನಿಮಗೆ ತಿಳಿದಿರುವಂತೆ, ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ತೆರವುಗೊಳಿಸುವುದು ಬಾಕಿ ಉಳಿದಿರುವ ವಿಷಯವಾಗಿದೆ. ಅದು ಇತ್ಯರ್ಥವಾಗಬೇಕೆಂಬುದು ನಮ್ಮ ನಿಲುವು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.














