ಜಮ್ಮು- ಕಾಶ್ಮೀರ: ಮೂವರು ಲಷ್ಕರ್ ಉಗ್ರರ ಎನ್‌ಕೌಂಟರ್‌

Coastal Bulletin
ಜಮ್ಮು- ಕಾಶ್ಮೀರ: ಮೂವರು ಲಷ್ಕರ್ ಉಗ್ರರ ಎನ್‌ಕೌಂಟರ್‌

ಶ್ರೀನಗರ(ಜಮ್ಮು ಕಾಶ್ಮೀರ): ದಕ್ಷಿಣ ಕಾಶ್ಮೀರದ ಶೋಫಿಯಾನ್​ ಜಿಲ್ಲೆಯ ​ಕೆಲ್ಲಾರ್‌ನ ಶುಕ್ರೂ ಪ್ರದೇಶದಲ್ಲಿ ಇಂದು ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಲಷ್ಕರ್ ಉಗ್ರರನ್ನು ಎನ್‌ಕೌಂಟರ್ ಮಾಡಲಾಗಿದೆ.

ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾದ ಉಗ್ರರಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಯುತ್ತಿದ್ದು, ಈ ಮಧ್ಯೆ ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್‌-ಇ-ತೈಬಾದ ಮೂವರು ಉಗ್ರರನ್ನು ಸಂಹಾರ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್​, ಭಾರತೀಯ ಸೇನೆ ಮತ್ತು ಕೇಂದ್ರ ಪೊಲೀಸ್​ ಮೀಸಲು ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ.

ಬೆಳಗ್ಗೆ ಕೆಲ್ಲಾರ್​ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಶೋಧ ನಡೆಯುತ್ತಿದೆ.

ಉಗ್ರರು ಅಡಗಿರುವ ಅರಣ್ಯ ಪ್ರದೇಶಕ್ಕೆ ಜಂಟಿ ಕಾರ್ಯಾಚರಣೆ ಪಡೆ ಆಗಮಿಸುತ್ತಿದ್ದಂತೆ, ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳೂ ಗುಂಡಿನ ದಾಳಿ ನಡೆಸಿವೆ. ಗುಂಡಿನ

ಚಕಮಕಿ ಮುಂದುವರೆದಿದ್ದು, ಸ್ಥಳಕ್ಕೆ ಹೆಚ್ಚಿನ ಪಡೆಗಳು ಆಗಮಿಸುತ್ತಿವೆ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪಹಲ್ಗಾಮ್‌ ಉಗ್ರರ ಪತ್ತೆಗೆ ಬಹುಮಾನ ಘೋಷಣೆ: ಏಪ್ರಿಲ್ 22ರಂದು ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಭಾಗಿಯಾದ ಮೂವರು ಉಗ್ರರ ಪತ್ತೆಗೆ ಪೊಲೀಸರು ಪೋಸ್ಟರ್ ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ದಾಳಿ ನಡೆದಿದೆ. ಶೋಪಿಯಾನ್ ಸೇರಿದಂತೆ ದಕ್ಷಿಣ ಕಾಶ್ಮೀರದ ಹಲವಾರು ಭಾಗಗಳಲ್ಲಿ ಭಯೋತ್ಪಾದಕರ ಪೋಸ್ಟರ್ ಪ್ರದರ್ಶಿಸಲಾಗಿದೆ. ಭಯೋತ್ಪಾದಕರನ್ನು ನಿಷೇಧಿತ ಭಯೋತ್ಪಾದಕ ಸಂಘಟನೆಯ ಸದಸ್ಯರು ಎಂದು ಗುರುತಿಸಲಾಗಿದ್ದು, ಸುಳಿವು ನೀಡಿದವರಿಗೆ 20 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಪೊಲೀಸರು ಈಗಾಗಲೇ ಘೋಷಿಸಿದ್ದಾರೆ.

Leave a Comment