ಜಮ್ಮು ಕಾಶ್ಮೀರದಲ್ಲಿ 3 ದಿನಗಳಲ್ಲಿ ಉಗ್ರರಿಂದ ಮೂರನೇ ದಾಳಿ; ಸೇನಾ ನೆಲೆ ಮೇಲೆ ಉಗ್ರರಿಂದ ದಾಳಿ.

Coastal Bulletin
ಜಮ್ಮು ಕಾಶ್ಮೀರದಲ್ಲಿ 3 ದಿನಗಳಲ್ಲಿ ಉಗ್ರರಿಂದ ಮೂರನೇ ದಾಳಿ; ಸೇನಾ ನೆಲೆ ಮೇಲೆ ಉಗ್ರರಿಂದ ದಾಳಿ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 3 ದಿನಗಳಲ್ಲಿ ಮೂರನೇ ಉಗ್ರ ದಾಳಿ ನಡೆದಿದೆ. ಸೇನಾ ನೆಲೆ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಸೈನಿಕರು ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ. ಕಥುವಾ ದಾಳಿಯ ಕೆಲವೇ ಗಂಟೆಗಳ ಬಳಿಕ ಭಯೋತ್ಪಾದಕರು ಸೇನಾ ನೆಲೆ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಓರ್ವ ಸೈನಿಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ದೋಡಾದ ಭದೇರ್ವಾ ಬನಿ ರಸ್ತೆಯಲ್ಲಿರುವ ಚತ್ತರಗಲ್ಲ ಪ್ರದೇಶದಲ್ಲಿ ಸೇನೆಯ ತಾತ್ಕಾಲಿಕ ಕಾರ್ಯಾಚರಣೆ ನೆಲೆ (TOB) ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಕನಿಷ್ಠ ಒಬ್ಬ ಸೈನಿಕ ಗಾಯಗೊಂಡಿದ್ದಾರೆ. ಉಗ್ರರ ಪತ್ತೆಗೆ ಎನ್‌ಕೌಂಟರ್ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಕಥುವಾದಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿದ ಇಬ್ಬರು ಭಯೋತ್ಪಾದಕರ ಪೈಕಿ ಒಬ್ಬನನ್ನು ನಿನ್ನೆ ರಾತ್ರಿ ಎನ್‌ಕೌಂಟರ್‌ನಲ್ಲಿ ತಟಸ್ಥಗೊಳಿಸಲಾಗಿದೆ. ಇತರ ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಭದ್ರತಾ ಪಡೆಗಳು

ಪ್ರದೇಶವನ್ನು ಸುತ್ತುವರೆದಿವೆ.

ಭಾನುವಾರ ರಿಯಾಸಿಯಲ್ಲಿ ಯಾತ್ರಾರ್ಥಿಗಳಿದ್ದ ಬಸ್​ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದ ಪರಿಣಾಮ 10 ಮಂದಿ ಪ್ರಾಣ ಕಳೆದುಕೊಂಡಿದ್ದರು, 30 ಮಂದಿ ಗಾಯಗೊಂಡಿದ್ದರು. ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಒಂದು ಗುಂಡು ಬಸ್ ಚಾಲಕನ ತಲೆಗೆ ತಾಗಿದ್ದು, ನಿಯಂತ್ರಣ ಕಳೆದುಕೊಂಡ ಪರಿಣಾಮ ಬಸ್​ ಕಂದಕಕ್ಕೆ ಬಿದ್ದಿತ್ತು. ಚಾಲಕನಿಗೆ ಗುಂಡು ತಗುಲುತ್ತಿದ್ದಂತೆ ಬಸ್​ನಲ್ಲಿದ್ದ ಹಲವರು ಸತ್ತಂತೆ ನಟಿಸಿದ್ದರು. ಬದುಕುಳಿದ 30 ಮಂದಿ ಪೈಕಿ ಕನಿಷ್ಠ 15 ಮಂದಿಗೆ ಗುಂಡು ತಗುಲಿದೆ.

Leave a Comment