ಆಂಧ್ರಪ್ರದೇಶ : ನಾಳೆಯಿಂದ ಚಂದ್ರಬಾಬು ನಾಯ್ಡು ದರ್ಬಾರ್, ಅಮರಾವತಿಯನ್ನು ರಾಜಧಾನಿಯಾಗಿ ಘೋಷಣೆ.

Coastal Bulletin
ಆಂಧ್ರಪ್ರದೇಶ : ನಾಳೆಯಿಂದ ಚಂದ್ರಬಾಬು ನಾಯ್ಡು ದರ್ಬಾರ್, ಅಮರಾವತಿಯನ್ನು ರಾಜಧಾನಿಯಾಗಿ ಘೋಷಣೆ.

ವಿಜಯವಾಡ: ಟಿಡಿಪಿ ಮುಖ್ಯಸ್ಥ, ನಿಯೋಜಿತ ಸಿಎಂ ನಾರಾ ಚಂದ್ರಬಾಬು ನಾಯ್ಡು ಅವರು ಮಂಗಳವಾರ ವಿಜಯವಾಡದಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಅಮರಾವತಿ ಆಂಧ್ರಪ್ರದೇಶದ ರಾಜಧಾನಿ ಎಂದು ಘೋಷಿಸಿದ್ದಾರೆ. ಟಿಡಿಪಿ-ಜೆಎಸ್‌ಪಿ-ಬಿಜೆಪಿ ಶಾಸಕರು ಎ-ಕನ್ವೆನ್ಷನ್ ಸೆಂಟರ್‌ನಲ್ಲಿ ಸಭೆ ನಡೆಸಿ ಚಂದ್ರಬಾಬು ನಾಯ್ಡು ಅವರನ್ನು ಸಿಎಂ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಅಟ್ಚನ್ ನಾಯ್ಡು ಅವರು ಚಂದ್ರಬಾಬು ನಾಯ್ಡು ಅವರನ್ನು ಟಿಡಿಎಲ್‌ಪಿ ನಾಯಕರಾಗಿ ಆಯ್ಕೆ ಮಾಡಿದ್ದಾರೆ ಎಂದು ಘೋಷಿಸಿದರು.

ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು  ನೇತೃತ್ವದ ತೆಲುಗು ದೇಶಂ ಪಾರ್ಟಿ ಭರ್ಜರಿ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ನಾಳೆ (ಜೂನ್‌ 12) ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದು, ಇದಕ್ಕಾಗಿ ಸಿದ್ಧತೆ ನಡೆಸಲಾಗಿದೆ. ಈ ಮಧ್ಯೆ ಮಂಗಳವಾರ ವಿಜಯವಾಡದಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರು, ಅಮರಾವತಿ ಯನ್ನು ಆಂಧ್ರ ಪ್ರದೇಶದ ರಾಜಧಾನಿಯನ್ನಾಗಿ ಘೋಷಿಸಿದರು. ಈ ಬಾರಿ ಆಂಧ್ರ ಪ್ರದೇಶದಲ್ಲಿ ಟಿಡಿಪಿ, ಬಿಜೆಪಿ ಮತ್ತು ಜೆಎಸ್‌ಪಿ ಒಟ್ಟಾಗಿ ಚುನಾವಣೆ ಎದುರಿಸಿದ್ದವು.

ಎ-ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಟಿಡಿಪಿ, ಬಿಜೆಪಿ ಮತ್ತು ಪವನ್‌ ಕಲ್ಯಾಣ ನೇತೃತ್ವದ ಜನಸೇನಾ ಪಾರ್ಟಿ(JSP)ಯ ಶಾಸಕರು ಪಾಲ್ಗೊಂಡಿದ್ದರು. ಈ ವೇಳೆ ಮುಖ್ಯಮಂತ್ರಿ ಹುದ್ದೆಗೆ ಚಂದ್ರಬಾಬು ನಾಯ್ಡು ಅವರ ಹೆಸರನ್ನು ಪವನ್‌ ಕಲ್ಯಾಣ ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿಯ ಡಿ.ಪುರಂದರೇಶ್ವರಿ ಬೆಂಬಲ ಸೂಚಿಸಿದರು. ಬಳಿಕ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ವೈಎಸ್‌ಆರ್‌ಸಿಪಿ ಮುಖಂಡ, ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರು ಈ ಹಿಂದೆ

ವಿಶಾಖಪಟ್ಟಣಂ ಅನ್ನು ಆಡಳಿತಾತ್ಮಕ ರಾಜಧಾನಿಯಾಗಿ ಅಭಿವೃದ್ಧಿಪಡಿಸುವುದಾಗಿ ಮತ್ತು ಅಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಹೇಳಿದ್ದರು. ಇದನ್ನು ಪ್ರಸ್ತಾವಿಸಿದ ಚಂದ್ರಬಾಬು ನಾಯ್ಡು, ವಿಶಾಖಪಟ್ಟಣಂನಲ್ಲಿ ವೈಎಸ್‌ಆರ್‌ಸಿಪಿಯನ್ನು ಸೋಲಿಸುವ ಮೂಲಕ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು. ಜಗನ್‌ ಮೋಹನ್‌ ರೆಡ್ಡಿ ಅವರು ಅಮರಾವತಿಯನ್ನು ಶಾಸಕಾಂಗ ರಾಜಧಾನಿಯಾಗಿ, ವಿಶಾಖಪಟ್ಟಣಂ ಅನ್ನು ಆಡಳಿತಾತ್ಮಕ ರಾಜಧಾನಿಯಾಗಿ ಮತ್ತು ಕರ್ನೂಲ್ ಅನ್ನು ನ್ಯಾಯಾಂಗ ರಾಜಧಾನಿಯನ್ನಾಗಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ವಿಕೇಂದ್ರೀಕೃತ ಅಭಿವೃದ್ಧಿಯ ಕಲ್ಪನೆಯನ್ನು ಹುಟ್ಟು ಹಾಕಿದ್ದರು.

ಸರ್ಕಾರದ ಧ್ಯೇಯವಾಕ್ಯ ‘ರಾಜ್ಯ ಮೊದಲು’ ಎಂದು ಚಂದ್ರಬಾಬು ನಾಯ್ಡು ತಿಳಿಸಿದರು. “ನಮ್ಮ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ನಮಗೆ ತಿಳಿದಿಲ್ಲ. ನಮ್ಮ ರಾಜ್ಯದ ಸಾಲ ಏನು, ಹಣವನ್ನು ಎಲ್ಲಿಂದ ಎರವಲು ಪಡೆಯಲಾಗಿದೆ ಮತ್ತು ಯಾವುದನ್ನು ಅಡಮಾನ ಇಡಲಾಗಿದೆ ಎಂಬುದೂ ತಿಳಿದಿಲ್ಲ. ಆದರೆ ನಾವು ‘ರಾಜ್ಯ ಮೊದಲು’ ಎಂಬ ಧ್ಯೇಯವಾಕ್ಯದೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಸರ್ವಾಂಗೀಣ ಅಭಿವೃದ್ಧಿಯ ಗುರಿಯನ್ನು ಹೊಂದಿದ್ದೇವೆ” ಎಂದು ಭರವಸೆ ನೀಡಿದರು.

Leave a Comment